ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿದ ಅನೇಕರು ಇಂದು ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್, ರಚಿತಾ ರಾಮ್, ಅದಿತಿ ಪ್ರಭುದೇವ, ಶ್ರೇತಾ ಶ್ರೀವಾತ್ಸವ್, ಮಯೂರಿ ಕ್ಯಾತರಿ ಹೀಗೆ ಕಿರುತೆರೆಯ ನಟನಾ ಮಣಿಯರು ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿದ ಚೆಂದುಳ್ಳಿ ಚೆಲುವೆಯ ಹೆಸರು ಅಂಕಿತಾ ಅಮರ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿಯಲ್ಲಿ ನಾಯಕಿ ಮೀರಾ ಆಲಿಯಾಸ್ ಕೋಳಿಮರಿಯಾಗಿ ಅಭಿನಯಿಸಿದ್ದ ಅಂಕಿತಾ ಅಮರ್ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ತೆಲುಗಿನ ಶ್ರೀಮತಿ ಶ್ರೀನಿವಾಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಪರಭಾಷೆಯ ಕಿರುತೆರೆ ವೀಕ್ಷಕರನ್ನು ರಂಜಿಸಿದ ಅಂಕಿತಾ ಅಮರ್ ಮಯೂರ್ ರಾಘವೇಂದ್ರ ನಿರ್ದೇಶಕದ ಅಬಜಬದಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿ ಗಾಯಕಿಯ ಪಾತ್ರಕ್ಕೆ ಜೀವ ತುಂಬಿರುವ ಅಂಕಿತಾ ಅಮರ್ ಪರಮಾಹ್ ಸ್ಟುಡಿಯೋಸ್ ನಿರ್ಮಾಣದಡಿಯಲ್ಲಿ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಲಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಾಯಕಿಯಾಗಿ ಮೋಡಿ ಮಾಡಲಿದ್ದಾರೆ.

“ನನಗೆ ಮೊದಲಿನಿಂದಲೂ ನಟನೆ ಎಂದರೆ ತುಂಬಾ ಇಷ್ಟ. ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಹೆಚ್ಚಿನವರು ಬೆಳ್ಳಿತೆರೆಯಲ್ಲಿ ಮಿಂಚುವ ಕನಸು ಕಂಡಿರುತ್ತಾರೆ. ಮಾತ್ರವಲ್ಲ ಇನ್ನು ಕೆಲವರು ಕಿರುತೆರೆಯೇ ನನ್ನ ಪ್ರಪಂಚ ಎಂದು ತಮ್ಮ ವ್ಯಾಪ್ತಿಯನ್ನು ಸೀಮಿತ ಮಾಡಿಕೊಳ್ಳುತ್ತಾರೆ. ನಾನು ಹಾಗಲ್ಲ. ರಂಗಭೂಮಿ, ಕಿರುತೆರೆ, ಹಿರಿತೆರೆ.. ಕ್ಷೇತ್ರ ಯಾವುದೇ ಆಗಿರಲಿ, ಒಟ್ಟಿನಲ್ಲಿ ಬಣ್ಣ ಹಚ್ಚಬೇಕು, ನಟಿಸಬೇಕು ಅಷ್ಟೇ. ಹಾಗಾಗಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ದೊರೆತಾಗ ನಾನು ಸಂತಸದಿಂದಲೇ ಒಪ್ಪಿಕೊಂಡೆ” ಎನ್ನುತ್ತಾರೆ ಅಂಕಿತಾ ಅಮರ್.

ಫಣಿ ರಾಮಚಂದ್ರ ನಿರ್ದೇಶನದ ಜಗಳಗಂಟಿಯರು ಧಾರಾವಾಹಿಯಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಂಕಿತಾ ರವಿಚಂದ್ರನ್ ನಟನೆಯ ತುಂಟದಲ್ಲಿಯೂ ಅಭಿನಯಿಸಿದರು. ಮುಂದೆ ಓದಿನ ಸಲುವಾಗಿ ನಟನಾ ಕ್ಷೇತ್ರಕ್ಕೆ ವಿದಾಯ ಹೇಳಿರುವ ಅಂಕಿತಾ ಮೆಡಿಕಲ್ ಬಯೋಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಪದವಿ ಪಡೆದ ನಂತರ ಮತ್ತೆ ನಟನೆಯತ್ತ ಮರಳಿದ ಈಕೆ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ಮಹೇಶನ ದೊಡ್ಡಪ್ಪನ ಮಗಳು ಸುಗುಣ ಆಗಿ ಮೋಡಿ ಮಾಡಿದರು. ಕುಲವಧು ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ಮಿಂಚಿದ ಅಂಕಿತಾ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡರು.

ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಅಂಕಿತಾ ಅಮರ್ ಇದೀಗ ಬೆಳ್ಳಿತೆರೆಗೆ ಕಾಲಿಟ್ಟಿದ್ದು ವೀಕ್ಷಕರ ಮನ ಸೆಳೆಯುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ