ವಿಭಿನ್ನ ರೀತಿಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದುಮಣಿಗಳು ಧಾರಾವಾಹಿಯು ಇದೀಗ ಯಶಸ್ವಿ 200 ಸಂಚಿಕೆ ಪೂರೈಸಿದೆ. ಧಾರಾವಾಹಿಯಲ್ಲಿ ನಾಯಕ ಶಿವು ಆಗಿ ಅಭನಯಿಸುತ್ತಿರುವ ರಕ್ಷಿತ್ ಅರಸ್ ಗೋಪಾಲ್ ಅವರು ತಮ್ಮ ಧಾರಾವಾಹಿ 200 ಸಂಚಿಕೆ ಪೂರೈಸುದುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

“ಇಲ್ಲಿಯ ತನಕ ನಾನು ಮಾಡಿರುವಂತಹ ಎಲ್ಲಾ ಪ್ರಾಜೆಕ್ಟ್ ಗಳಲ್ಲಿ ನಾನು ಮೊದಲಿನಿಂದ ನಟಿಸಿದ್ದು ಯಾವುದು ಇಲ್ಲ. ಪ್ರತಿಯೊಂದರಲ್ಲೂ ಪ್ರಾಜೆಕ್ಟ್ ಶುರುವಾಗಿ, ಧಾರಾವಾಹಿ ಪ್ರಸಾರ ಶುರುವಾಗಿ ಕೆಲವು ಸಂಚಿಕೆ ಕಳೆದ ಮೇಲೆ ನಾನು ತಂಡ ಸೇರಿಕೊಳ್ಳುತ್ತಿದ್ದೆ. ಇನ್ನು ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕ ವಸಂತ ಪಾತ್ರಧಾರಿ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ನಾನು ಹೋದೆ. ಆದರೆ ಮುದ್ದು ಮಣಿಗಳು ನನ್ನ ಪಾಲಿಗೆ ತುಂಬಾ ಸ್ಪೆಷಲ್. ಯಾಕೆಂದರೆ ಈ ಧಾರಾವಾಹಿಯ ಆರಂಭದಲ್ಲಿಯೇ ನನಗೆ ಅಭಿನಯಿಸಲು ಅವಕಾಶ ದೊರಕಿತು” ಎಂದು ಸಂತಸದಿಂದ ಹೇಳುತ್ತಾರೆ ರಕ್ಷಿತ್ ಅರಸ್ ಗೋಪಾಲ್.

“ಆರಂಭದಿಂದಲೂ ಧಾರಾವಾಹಿಯ ಭಾಗವಾಗಿರುವುದರಿಂದ ಮೇಕಿಂಗ್ ಮಾತ್ರವಲ್ಲದೇ ಪಾತ್ರವನ್ನು ಕಟ್ಟಿಕೊಳ್ಳುವುದರ ಬಗ್ಗೆ ಉತ್ತಮವಾದ ಅನುಭವವನ್ನು ನಾನು ಪಡೆದುಕೊಂಡೆ. ಈಗ ಈ ಧಾರಾವಾಹಿಯು 200 ಸಂಚಿಕೆ ಪೂರೈಸಿರುವುದು ಖುಷಿ ತಂದಿದೆ” ಎನ್ನುತ್ತಾರೆ.

“ಮುದ್ದುಮಣಿಗಳು ಧಾರಾವಾಹಿಯಲ್ಲಿ ಕೊಟ್ಟಿಗೆಹಾರದ ಸಂಚಿಕೆಯ ದೃಶ್ಯಗಳು ಈಗಲೂ ಕಾಡುತ್ತಿರುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ಕಿರುತೆರೆ ವೀಕ್ಷಕರು ಶಿವು ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಸುವರ್ಣ ಪೋಸ್ಟ್ ಗಳಲ್ಲಿಯೂ ಸಾಕಷ್ಟು ಪಾಸಿಟಿವ್ ಕಮೆಂಟ್ ಗಳು ಕೂಡಾ ಬರುತ್ತಿದೆ. ರವಿಚಂದ್ರನ್ ಸರ್ ಅವರ ಅಭಿಮಾನಿಯಾಗಿ ನಟಿಸುತ್ತಿರುವುದೇ ಇದಕ್ಕೆ ಕಾರಣ ಎಂದು ನಂಬಿಕೊಂಡಿದ್ದೇನೆ. ಜೊತೆಗೆ ಅದೇ ಕಾರಣದಿಂದ ವೀಕ್ಷಕರಿಗೂ ನಾನು ಹತ್ತಿರವಾದೆ ಎಂದೆನಿಸುತ್ತದೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ರಕ್ಷಿತ್ ಅರಸ್ ಗೋಪಾಲ್.

“ಇಂದು ನಾನು ಎಲ್ಲೇ ಹೋದರೂ ಜನ ಮುದ್ದುಮಣಿಗಳು ಧಾರಾವಾಹಿಯ ಶಿವು ಆಗಿ ಗುರುತಿಸುತ್ತಾರೆ. ಇಂತಹ ‘ಸುವರ್ಣ’ಅವಕಾಶ ನೀಡಿದ ನಿರ್ದೇಶಕ ತ್ರಿಶೂಲ್ ಸರ್, ಮಣಿಶಂತ್ ಸರ್ ಹಾಗೂ ನಿರ್ಮಾಪಕ ಹರೀಶ್ ಬಾಬು ಇವರೆಲ್ಲರಿಗೂ ನನ್ನ ಪರವಾಗಿ ಧನ್ಯವಾದಗಳು. ಇದರ ಜೊತೆಗೆ ನನ್ನೆಲ್ಲಾ ಸಹಕಲಾವಿದರುಗಳಿಗೂ ಕೂಡಾ ಧನ್ಯವಾದಗಳು” ಎಂದಿದ್ದಾರೆ.

ಕೊನೆಯಲ್ಲಿ “ನಮ್ಮ ಧಾರಾವಾಹಿ ಯಶಸ್ವಿ 200 ಸಂಚಿಕೆ ಪೂರೈಸಿ ಮುನ್ನುಗುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ವೀಕ್ಷಕರು. ನಿಮ್ಮ ಪ್ರೀತಿ ನಿರಂತರವಾಗಿರಲಿ. ಈಗ ನಮ್ಮನ್ನು ಕೈ ಹಿಡಿದು ನಡೆಸಿದಂತೆ ಮುಂದೆಯೂ ನೀವು ನಮ್ಮನ್ನು ನಡೆಸುತ್ತೀರಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ನನ್ನ ಮೇಲೆ, ನಮ್ಮ ತಂಡದ ಮೇಲೆ ನಿರಂತರವಾಗಿ ಇರಲಿ” ಎಂದು ಹೇಳಿಕೊಂಡಿದ್ದಾರೆ ರಕ್ಷಿತ್ ಅರಸ್ ಗೋಪಾಲ್.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ