ಡಾಕ್ಟರ್, ಇಂಜಿನಿಯರ್, ಸೈಂಟಿಸ್ಟ್, ಟೀಚರ್, ಲೆಕ್ಚರರ್ ಹೀಗೆ ಒಬ್ಬೊಬ್ಬರ ಕನಸು ಒಂದೊಂದು. ಅಂತೆಯೇ ಈಕೆಗೂ ಒಂದು ಕನಸಿತ್ತು! ಅದು ಮಾಡೆಲ್ ಆಗಬೇಕು, ರೂಪಸರ್ಶಿಯಾಗಿ ಮಿಂಚಬೇಕು ಎಂಬುದೇ ಆಕೆಯ ಕನಸು. ಆಕೆಯ ಹೆಸರು ವಿನಯಾ ಗಣೇಶ್. ಮಾಡೆಲ್ ಆಗಬೇಕು ಎಂಬ ಕನಸು ನನಸು ಮಾಡಿಕೊಂಡ ಸಂತಸದಲ್ಲಿರುವ ವಿನಯಾ ಅವರ ಬಣ್ಣದ ಪಯಣ ಶುರುವಾಗಿ ಬರೋಬ್ಬರಿ ಒಂದು ವರ್ಷ ಆಗಿದೆ.

ಮಾಡೆಲಿಂಗ್ ನಲ್ಲಿ ಬದುಕು ರೂಪಿಸಲು ಶ್ರಮಿಸುತ್ತಿರುವ ಕುಂದಾಪುರದ ಕುವರಿ ವಿನಯಾ ಬಿ.ಕಾಂ ಪದವಿಧರೆಯೂ ಹೌದು. ಪದವಿ ವಿದ್ಯಾಭ್ಯಾಸದ ಬಳಿಕ ಮಾಡೆಲ್ ಕ್ಷೇತ್ರದತ್ತ ಮುಖ ಮಾಡಿದ ವಿನಯಾ 2020 ರ ಮಿಸ್ ಕರ್ನಾಟಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಚೆಲುವೆ. ಮುಂದೆ ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿ ಸೈ ಎನಿಸಿಕೊಂಡಿರುವ ಈಕೆ ಜ್ಯುವೆಲ್ಲರಿ ಶೋಗಳಲ್ಲಿ ರೂಪದರ್ಶಿಯಾಗಿ ನೋಡುಗರ ಕಣ್ಣು ಕುಕ್ಕಿದ ಬೆಡಗಿ.

ಸದ್ಯ ಜ್ಯುವೆಲರಿ ಶೂಟ್ ಗಳ ಜೊತೆಗೆ ಮೇಕ್ ಓವರ್ಸ್ ಶೂಟ್ ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ವಿನಯಾ ಗೆ ಗ್ರೂಮಿಂಗ್ ಕ್ಲಾಸ್ ಅವರಿಂದ ಮಾಡೆಲಿಂಗ್ ಕುರಿತಾದ ವಿಶೇಷ ತರಬೇತಿಯನ್ನು ಕೂಡಾ ಪಡೆಯುತ್ತಿದ್ದಾರೆ.

“ಅವಕಾಶ ಸಿಕ್ಕರೆ ನಟನಾ ಕ್ಷೇತ್ರಕ್ಕೆ ಕಾಲಿಡುವ ಮನಸ್ಸಿದೆ. ಮಾತ್ರವಲ್ಲ ಈಗಾಗಲೇ ನನಗೆ ಒಂದಷ್ಟು ಅವಕಾಶಗಳು ಕೂಡಾ ಬಂದಿತ್ತು. ಆದರೆ ಯಾವುದು ನನಗೆ ಇಷ್ಟ ಆಗಲಿಲ್ಲ. ಒಳ್ಳೆಯ ಕಥೆಯ ಜೊತೆಗೆ ಉತ್ತಮ ಪಾತ್ರ ದೊರೆತರೆ ನಾನು ನಟಿಸಲು ತಯಾರಾಗಿದ್ದೇನೆ. ಸಿನಿಮಾ ಆಗಲೀ, ಸೀರಿಯಲ್ ಆಗಲೀ ಪರವಾಗಿಲ್ಲ, ಉತ್ತಮ ಪಾತ್ರವಷ್ಟೇ ಮುಖ್ಯ” ಎಂದು ಹೇಳುತ್ತಾರೆ ವಿನಯಾ.

“ನಾನಿಂದು ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟಿದ್ದೇನೆ ಎಂದರೆ ಅದಕ್ಕೆ ಮುಖ್ಯ ಪ್ರೇರಣೆ ಎಂದರೆ ಕಿಚ್ಚ ಸುದೀಪ್ ಅವರು. ಕಿಚ್ಚ ಸುದೀಪ್ ಅವರ ಸ್ಪರ್ಶ ಸಿನಿಮಾವೇ ನಾನು ಮಾಡೆಲ್ ಆಗಲೂ ಸ್ಫೂರ್ತಿ. ಅದರಲ್ಲಿ ಅವರು ಮಾಡೆಲ್ ಆಗಿ ನಟಿಸಿದ್ದರು. ಅದುವೇ ನನ್ನನ್ನು ಈ ಕ್ಷೇತ್ರದತ್ತ ಆಕರ್ಷಿಸಿತು” ಎನ್ನುವ ವಿನಯಾ ಅವರಿಗೆ ಅಮ್ಮನ ಪ್ರೋತ್ಸಾಹವೂ ಇದೆ.

ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ನನಸು ಮಾಡಿಕೊಂಡಿರುವ ಕುಂದಾಪುರದ ಕುವರಿ ವಿನಯಾ ಗಣೇಶ್ ಅವರು ಮತ್ತಷ್ಟು ಮಿಂಚಲಿ ಎಂಬುದೇ ನಮ್ಮ ಹಾರೈಕೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ