‘ಲವ್ ಮಾಕ್ಟೈಲ್’ ಖ್ಯಾತಿಯ ನಟಿ ಮಿಲನ ನಾಗರಾಜ್ ಇದೀಗ ಹೊಸ ಚಿತ್ರದ ಬಿಡುಗಡೆಗೆಯ ತಯಾರಿಯಲ್ಲಿದ್ದಾರೆ. ಕೇವಲ ಫೋಟೋಗಳಿಂದಲೇ ಕುತೂಹಲ ಕೆರಳಿಸಿದ್ದ ಈ ಚಿತ್ರ ರಿಲೀಸ್ ಡೇಟ್ ಅನ್ನು ಘೋಷಿಸಿದೆ. ದಿಯಾ ಚಿತ್ರದ ಖ್ಯಾತಿಯ ಪೃಥ್ವಿ ಅಂಬರ್, ಈ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಇದೇ ಮೊದಲ ಬಾರಿಗೆ ಮಿಲನಾ ನಾಗರಾಜ್ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಯಾವ ಚಿತ್ರ ಅಂತ ಯೋಚಿಸುತ್ತಿದ್ದೀರಾ…
ಅದೇ ‘F0R REGN’. ನವೀನ್ ರಾವ್ ನಿರ್ಮಾಣದ ಈ ಚಿತ್ರಕ್ಕೆ ನವೀನ್ ದ್ವಾರಕನಾಥ್ ನಿರ್ದೇಶನ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಸಿನಿಮಾದ ಫಸ್ಟ್ ಲುಕ್ ಹಾಗೂ ರಿಲೀಸ್ ಡೇಟ್ ಅನ್ನು ಸಿನಿಮಾ ತಂಡ ಘೋಷಿಸಿದೆ. ಈ ಜೋಡಿಯ ಮೊದಲ ಸಿನಿಮಾ ‘FOR REGN’ ಅಲಿಯಾಸ್ ಫಾರ್ ರಿಜಿಸ್ಟರೇಷನ್ ಚಿತ್ರ 2023, ಫೆಬ್ರವರಿ 10ರಂದು ಅದ್ಧೂರಿಯಾಗಿ ಬಿಡುಗಡೆಗೊಳ್ಳಲಿದೆ.

ನಟಿ ಮಿಲನ ನಾಗರಾಜ್‌ಗೆ ಫೆಬ್ರವರಿ ತಿಂಗಳು ಬಹಳ ಅದೃಷ್ಟದ ತಿಂಗಳಂತೆ. ಬಹಳ ಯಶಸ್ಸು ಕೊಟ್ಟ ‘ಲವ್ ಮಾಕ್ಟೇಲ್’ ಸಿನಿಮಾ ಕೂಡ ಫೆಬ್ರವರಿಯಲ್ಲೇ ಬಿಡುಗಡೆ ಆಗಿತ್ತು. ಈಗ ‘F0R REGN’ ಕೂಡ ಫೆಬ್ರವರಿ ತಿಂಗಳಲ್ಲಿಯೇ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ ಮಿಲನಾ ನಾಗರಾಜ್. “ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಬಹಳಷ್ಟು ಸಮಾಧಾನ ಹಾಗೂ ಖುಷಿ ತಂದಿದೆ” ಎಂದಿದ್ದಾರೆ ಮಿಲನ ನಾಗರಾಜ್.

ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಜೋಡಿಯ ಸಿನಿಮಾ, ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲವನ್ನಂತೂ ಕೆರಳಿಸಿದೆ. ಸಿನಿಮಾ ಟೈಟಲ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ. ಆದರೆ, ಫಸ್ಟ್ ಲುಕ್ ಹಾಗೂ ಫೋಟೊಗಳು ಬೇರೆ ಏನೋ ಕಥೆಯನ್ನು ಹೇಳುತ್ತಿವೆ. ಅಷ್ಟಕ್ಕೂ ಈ ಚಿತ್ರ ಹುಟ್ಟಿದ್ದು ಹೇಗೆ ಅನ್ನೋದನ್ನು ನಿರ್ದೇಶಕರು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ.

‘ನಾನು ಹಾಗೂ ಈ ಚಿತ್ರದ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಆಗಾಗ ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು ದಿನ ನನ್ನ ಸ್ನೇಹಿತ ನವೀನ್ ರಾವ್ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ನಾಯಕ – ನಾಯಕಿ ಅಂತ ನಿರ್ಧರಿಸಲಾಯಿತು. ಆಗ ಅವರಿಬ್ಬರ ‘ ದಿಯಾ’ ಹಾಗೂ ‘ಲವ್ ಮಾಕ್ಟೇಲ್’ ಸಿನಿಮಾಗಳು ಯಶಸ್ವಿಯಾಗಿದ್ದವು. ಈ ರೀತಿಯಲ್ಲಿ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ.’ ಎಂದು ಸಂತಸ ವ್ಯಕ್ತಪಡಿಸಿದರು ನಿರ್ದೇಶಕ ನವೀನ್ ದ್ವಾರಕನಾಥ್.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ