ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ಓಟಿಟಿ ಸೀಸನ್ ವಿಜೇತ ರೂಪೇಶ್ ಶೆಟ್ಟಿ ಎಲ್ಲರಿಗೂ ಗೊತ್ತೇ ಇದೆ. ಈಗ ಒಂಬತ್ತನೆಯ ಸೀಸನ್ನಲ್ಲಿ ಒಳ್ಳೆಯ ಸ್ಪರ್ಧಿಯಾಗಿ ಚೆನ್ನಾಗಿ ಆಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕೂ ಮುನ್ನ ರೂಪೇಶ್ ಶೆಟ್ಟಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದುವೇ ‘ಮಂಕು ಭಾಯ್ ಫಾಕ್ಸಿ ರಾಣಿ’. ಇದೀಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರೂಪೇಶ್ ಶೆಟ್ಟಿ ಅವರು ಬಿಗ್‌ಬಾಸ್ ಪ್ರವೇಶ ಮಾಡಿದ ಬಳಿಕ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಅವರೇ ನಟಿಸಿದ ಸಿನಿಮಾದ ಬಿಡುಗಡೆಗೆ ಇದು ಸೂಕ್ತ ಸಮಯವೂ ಇದಾಗಿದೆ.

ಈಗಾಗಲೇ ಈ ಚಿತ್ರ “ಮಂಕು ಭಾಯ್ ಫಾಕ್ಸಿ ರಾಣಿ” ಎಂಬ ವಿಶೇಷ ಟೈಟಲ್ ಮೂಲಕವೇ ಎಲ್ಲರ ಗಮನವನ್ನು ಸೆಳೆಯುತ್ತಿದೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯೊಳಗೆ ಇದ್ದರೂ ಚಿತ್ರತಂಡ ಸಿನಿಮಾ ಪ್ರಚಾರ ಕೆಲಸವನ್ನು ಭರ್ಜರಿಯಾಗಿ ಆರಂಭಿಸಿದೆ.
ಚಿತ್ರದ ಹಾಡುಗಳೂ ಸಿನಿಪ್ರಿಯರ ಮನಸೂರೆಗೊಳಿಸುತ್ತಿದ್ದು, ಸದ್ಯ ಈ ಚಿತ್ರದ ‘ತಂಗಾಳಿಯೇ ತಲುಪಿಸು’ ಹಾಡು ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ.

‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರ ಲವ್ ಸಸ್ಪೆನ್ಸ್ ಕಥಾಹಂದರವನ್ನು ಒಳಗೊಂಡಿದೆ. ಈ ಸಿನಿಮಾವನ್ನು ನಿರ್ದೇಶಿಸಿರುವ ಗಗನ್ ಎಂ ಈಗಾಗಲೇ ಕಿರುಚಿತ್ರ ಹಾಗೂ ಕೆಲ ತುಳು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿದ್ದು, ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕನಾಗಿದ್ದಾರೆ.

ಚಿತ್ರದ “ಮಂಕು ಭಾಯ್ ಫಾಕ್ಸಿ ರಾಣಿ” ಪ್ಯಾಥೋ ಸಾಂಗನ್ನು ತಮಿಳಿನ ಖ್ಯಾತ ಗಾಯಕ ಹರಿಚರಣ್ ಹಾಡಿದ್ದಾರೆ. ಕೀರ್ತನ್ ಭಂಡಾರಿ ಸಾಹಿತ್ಯ, ವಿನ್ಯಾಸ್ ಮದ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ, ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ರಿಲೀಸ್ ಆಗಿದ್ದ ಸೋನು ನಿಗಮ್ ಹಾಡಿದ್ದ ‘ಮಿಂಚಂತೆ ಮಿನುಗುತಿರೊ’ ಸಾಂಗ್ ಕೂಡ ಗಮನ ಸೆಳೆದಿತ್ತು. ರೂಪೇಶ್ ಶೆಟ್ಟಿ ಅವರಿಗೆ ನಟನೆ ಹೊಸದೇನಲ್ಲ ಈಗಾಗಲೇ ಹಲವು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾದಲ್ಲಿ ವಿಭಿನ್ನ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು ಸಹ ನಟರಾಗಿ ಪಂಚಮಿ ರಾವ್, ‘ಬ್ರಹ್ಮಗಂಟು’ ಧಾರಾವಾಹಿಯ ಗೀತಾ ಭಾರತಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ವಿನ್ಯಾಸ್ ಮದ್ಯ ಹಾಗೂ ಶಮೀರ್ ಮುಡಿಪು ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ ಷಜಹಾನ್ ಕ್ಯಾಮೆರಾ ನಿರ್ದೇಶನ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣರವರ ಸಂಕಲನ ಚಿತ್ರಕ್ಕಿದೆ. ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾಗೆ ಸೆನ್ಸಾರ್ ಅಧಿಕಾರಿಗಳಿಂದ ಯು/ಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ‘ಮಂಕು ಭಾಯ್ ಫಾಕ್ಸಿ ರಾಣಿ’ 2023ರ ಜನವರಿಯಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ