ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಧಾರಾವಾಹಿ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ರಾಜೀವ ಆಗಿ ನಟಿಸಿದ್ದ ಗಗನ್ ಚಿನ್ನಪ್ಪ ಸಣ್ಣ ಗ್ಯಾಪ್ ನ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಗಗನ್ ಚಿನ್ನಪ್ಪ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಮುಂದೆ ನಟನೆಯಲ್ಲಿ ಕಾಣಿಸಿಕೊಳ್ಳದ ಗಗನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಅದು ತೆಲುಗು ಕಿರುತೆರೆಯಲ್ಲಿ.

ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕೃಷ್ಣ ಮುಕುಂದ ಮುರಾರಿ ಯಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಮರಳಿದ್ದಾರೆ ಗಗನ್ ಚಿನ್ನಪ್ಪ. ಇದೇ ಮೊದಲ ಬಾರಿಗೆ ಗಗನ್ ಚಿನ್ನಪ್ಪ ಅವರು ಪರಭಾಷೆಯ ಕಿರುತೆರೆಗೆ ಕಾಲಿಟ್ಟಿದ್ದು ಅದರಲ್ಲಿಯೂ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಆಟೋಮೊಬೈಲ್ ಇಂಡಸ್ಟ್ರಿಯ ಮಾರ್ಕೆಟಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿದ್ದ ಗಗನ್ ಚಿನ್ನಪ್ಪ ಮೂರು ವರ್ಷಗಳ ಕಾಲ ದೂರದ ಜರ್ಮನಿ ಮತ್ತು ಓಮನ್ ನಲ್ಲಿ ಕಾರ್ಯ ನಿರ್ವಹಿಸಿದರು. ತದ ನಂತರ ಭಾರತಕ್ಕೆ ವಾಪಸಾದ ಕೊಡಗಿನ ಕುವರ ಇಲ್ಲಿನ ಐಟಿ ಕಂಪೆನಿಯೊಂದರಲ್ಲಿ ಕೆಲಸವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಸಣ್ಣ ವಯಸ್ಸಿನಿಂದಲೂ ನಟನಾಗಬೇಕು ಎಂಬ ಕನಸು ಕಂಡಿದ್ದ ಗಗನ್ ಚಿನ್ನಪ್ಪಗೆ ಆ ಕನಸು ನನಸು ಮಾಡುವುದು ಮುಖ್ಯವಾಗಿತ್ತು. ಅದೇ ಕಾರಣದಿಂದ ಬಿಡುವು ದೊರೆತಾಗಲೆಲ್ಲಾ ಆಡಿಶನ್ ಗಳನ್ನು ನೀಡಲಾರಂಭಿಸಿದ್ದರು. ಮಂಗಳ ಗೌರಿ ಮದುವೆಯ ರಾಜೀವ ಆಗಿ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನೆಗೆ ಕಾಲಿಟ್ಟ ಗಗನ್ ಚಿನ್ನಪ್ಪ ನಟನೆಯ ಎಲ್ಲಾ ವಿಧಾನಗಳನ್ನು ಹಂತಹಂತವಾಗಿ ಕಲಿತುಕೊಂಡರು.

“ನನ್ನ ತಂದೆ ಸಿಬಿಐ ಡಿಟೆಕ್ಟಿವ್ ಆಗಿದ್ದರು. ಅವರಿಗೆ ನಾನು ಪೊಲೀಸ್ ಅಧಿಕಾರಿಯಾಗಬೇಕು ಎಂಬ ಮನಸ್ಸಿತ್ತು. ನನಗೆ ನಟನಾಗಬೇಕು ಇಲ್ಲ ಕ್ರಿಕೆಟರ್ ಆಗಬೇಕು ಎಂಬ ಕನಸಿತ್ತು. ಆಶ್ಚರ್ಯ ಎಂದರೆ ಮೊದಲ ಧಾರಾವಾಹಿಯಲ್ಲಿಯೇ ಪೊಲೀಸ್ ಅಧಿಕಾರಿ ಪಾತ್ರ ನನಗೆ ದೊರಕಿತ್ತು. ರಿಯಲ್ ಅಲ್ಲದಿದ್ದರೂ ರೀಲ್ ಆಗಿಯಾದರೂ ಅಪ್ಪನ ಆಸೆ ಈಡೇರಿಸಿದ ಖುಷಿ ನನಗಿದೆ” ಎಂದಿದ್ದರು ಗಗನ್ ಚಿನ್ನಪ್ಪ. ಇದೀಗ ತೆಲುಗು ಕಿರುತೆರೆಗೆ ಕಾಲಿಟ್ಟಿರುವ ಗಗನ್ ಅಲ್ಲಿಯೂ ವೀಕ್ಷಕರ ಮನ ಸೆಳೆಯುತ್ತಾರಾ ಕಾದು ನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ