ಹ್ಯಾಟ್ರಿಕ್ ಹೀರೊ ಶಿವಣ್ಣನ ನಟನೆಯ ಘೋಸ್ಟ್ ಚಿತ್ರ ಈಗ ಬಹಳಷ್ಟು ಚರ್ಚೆಯಲ್ಲಿದೆ. ಈಗಾಗಲೇ ಚಿತ್ರೀಕರಣ ಆರಂಭಗೊಂಡಿರುವುದರಿಂದ ಚಿತ್ರ ತಂಡ ಅದರ ಸೆಟ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ. ಶಿವಣ್ಣನ ಮೊದಲ ಹಂತದ ಶೂಟಿಂಗ್ ಕೂಡ ಕೊನೆಗೊಂಡಿದೆ. ಈ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ಮಲಯಾಳಂ ನಟ ಜಯರಾಂ ನಟಿಸುತ್ತಿರುವುದು ವಿಶೇಷ.

ಹೌದು! ಘೋಸ್ಟ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿರುವ ಜಯರಾಂ ತಾವು ಕನ್ನಡ ಭಾಷೆಯನ್ನು ಕಲಿತಿದ್ದಲ್ಲದೆ, ಚಿತ್ರಕ್ಕೆ ತಾವೇ ಡಬ್ಬಿಂಗ್ ಮಾಡುವುದಾಗಿಯೂ ಹೇಳಿದ್ದಾರೆ. ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಲು ಮುಖ್ಯ ಪ್ರೇರಣೆ ಶಿವಣ್ಣ ಎಂದು ಹೇಳಿದ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ. “ನನ್ನ ಮೊದಲ ಕನ್ನಡ ಸಿನಿಮಾದಿಂದ ಕರ್ನಾಟಕದ ಜನತೆ ಸಂತಸಗೊಂಡಿದ್ದಾರೆ. ನಾನು ಅವರಿಗೆಲ್ಲಾ ವಿಶೇಷವಾಗಿ ಧನ್ಯವಾದ ಹೇಳಲಿಚ್ಛಿಸುತ್ತೇನೆ” ಎಂದು ಕರ್ನಾಟಕದೊಂದಿಗೆ ತಮ್ಮ ನಂಟನ್ನು ಸ್ಮರಿಸಿಕೊಂಡ ಜಯರಾಂ ಅವರು ನಟನಾಗಿ ತಮ್ಮ ವೃತ್ತಿಜೀವನದ ಬಗ್ಗೆ ನೆನೆಯುವಾಗ 1987-88 ಕ್ಕೆ ಹಿಂತಿರುಗಿದರು.

“ಅದು ನನ್ನ ನಟನಾ ವೃತ್ತಿಜೀವನದ ಆರಂಭದ ದಿನಗಳು. ಆ ದಿನಗಳಲ್ಲಿ ನಾವು ಹೆಚ್ಚಾಗಿ ಸಣ್ಣ-ಬಜೆಟ್ ಚಿತ್ರಗಳನ್ನು ಮಾಡುತ್ತಿದ್ದೆವು. ನಾಲ್ಕರಿಂದ ಐದು ಹಾಡುಗಳು ಇರುತ್ತಿದ್ದವು. ಹಾಗಾಗಿ ಯಾವುದೇ ಹಾಡನ್ನು ಶ್ರೀಮಂತವಾಗಿ ಚಿತ್ರಿಸಬೇಕಾದರೆ, ನಮ್ಮ ಕನಸಿನ ತಾಣ ಮೈಸೂರಿನ ಬೃಂದಾವನ ಗಾರ್ಡನ್ಸ್ ಆಗಿತ್ತು. ನನ್ನ ಹಾಡಿನ ಹಿನ್ನಲೆಯಲ್ಲಿ ಕಾರಂಜಿಗಳು ಇರಬೇಕು ಎಂದು ನಾನು ನಿರ್ಮಾಪಕರನ್ನು ಎಷ್ಟು ವಿನಂತಿಸುತ್ತಿದ್ದೆ ಎಂದು ನನಗೆ ನೆನಪಿದೆ” ಎಂದು ಜಯರಾಂ ಅವರು ತಮ್ಮ ಕರ್ನಾಟಕದೊಂದಿಗಿನ ಗತಕಾಲದ ಬಾಂಧವ್ಯವನ್ನು ಹಂಚಿಕೊಂಡರು.

ಜೊತೆಗೆ “ಇಂದು, ಬೆಂಗಳೂರು ನಗರದ ಮೂಲಸೌಕರ್ಯಗಳು ಬದಲಾಗಿದೆ, ಆದರೆ ಅದರ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ಇನ್ನೂ ಸುಂದರ ನಗರವಾಗಿದೆ. ಬನ್ನೇರುಘಟ್ಟ, ನಾಗರಹೊಳೆ, ಬಂಡೀಪುರ, ಕಬಿನಿಗೆ ಭೇಟಿ ಆಗಾಗ ನೀಡುವ ಜಯರಾಂ ಪ್ರಕೃತಿ ಪ್ರಿಯರೂ ಹೌದು. ವನ್ಯಜೀವಿಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ.
ಇದೀಗ ಕನ್ನಡ ಸಿನಿಮಾ ಘೋಸ್ಟ್ ಅಲ್ಲಿನ ಅವರ ಪಾತ್ರ ಹಾಗೂ ಅಭಿನಯ ಹೇಗಿದೆ ಎಂಬುದನ್ನು ಪ್ರೇಕ್ಷಕರು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ