ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿದ ನಟ ನಟಿಯರು ಕ್ರಮೇಣ ಬೆಳ್ಳಿತೆರೆಯಲ್ಲಿ ಬದುಕು ರೂಪಿಸಿಕೊಳ್ಳವುದು ಮಾಮೂಲಿಯಾದ ಸಂಗತಿ. ಕಾಫಿನಾಡಿನ ಕುವರಿ ಗಾನವಿ ಲಕ್ಷ್ಮಣ್ ಕೂಡಾ ಅದಕ್ಕೆ ಹೊರತಾಗಿಲ್ಲ. ಮಗಳು ಜಾನಕಿಯಾಗಿ ಕಿರುತೆರೆ ಎಂಬ ಪುಟ್ಟ ಪ್ರಪಂಚಕ್ಕೆ ಕಾಲಿಟ್ಟ ಗಾನವಿ ಲಕ್ಷ್ಮಣ್ ಇಂದು ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ಮೋಡಿ ಮಾಡಿದ ಗಾನವಿ ಮೊದಲ ಧಾರಾವಾಹಿಯಲ್ಲಿಯೇ ಪ್ರಧಾನ ಪಾತ್ರದಲ್ಲಿ ಮಿಂಚಿದ ಪ್ರತಿಭೆ. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮಿಂಚಿದ ಗಾನವಿ ಲಕ್ಷ್ಮಣ್ ಇದೀಗ ಹಿರಿತೆರೆಯಲ್ಲಿ ಬ್ಯುಸಿ.

ಮಗಳು ಜಾನಕಿ ಧಾರಾವಾಹಿಯ ನಂತರ ಹಿರಿತೆರೆಯತ್ತ ಮುಖ ಮಾಡಿದ ಗಾನವಿ ಲಕ್ಷ್ಮಣ್ ಗಿರೀಶ್ ಕುಮಾರ್ ನಿರ್ದೇಶನದ ಭಾವಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಮುಂದೆ ರಿಷಬ್ ಶೆಟ್ಟಿ ನಿರ್ದೇಶನದ ಹೀರೋ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಗಾನವಿ ನಾಥೂರಾಮ ಸಿನಿಮಾದಲ್ಲಿ ನಾಯಕಿಯಾಗಿ ಮೋಡಿ ಮಾಡಿದರು.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಗಾನವಿ ಕಿರುಚಿತ್ರದಲ್ಲಿ ಮಿಂಚಿದ ಪ್ರತಿಭೆ. ಸೈಕಾಲಜಿ ಉಪನ್ಯಾಸಕ ಮತ್ತು ಲೈಂಗಿಕ ವರ್ಕರ್ ನಡುವೆ ನಡೆಯುವ ಕಥೆಯನ್ನೊಳಗೊಂಡ “ಗುಟ್ರುಗೂ” ಕಿರುಚಿತ್ರದಲ್ಲಿ ಲೈಂಗಿಕ ವರ್ಕರ್ ಆಗಿ ಚಿಖ್ಮ ಕಾಣಿಸಿಕೊಂಡಿದ್ದರು. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಆ ಕಿರುಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಮಾತ್ರವಲ್ಲ ಗಾನವಿ ಅವರ ನಟನೆಗೂ ಕೂಡಾ ನೆಟ್ಟಿಗರು ಮನ ಸೋತಿದ್ದರು.

ಇನ್ನು ಒಂದಾದ ಮೇಲೆ ಒಂದರಂತೆ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಅವಕಾಶ ಪಡೆಯುತ್ತಿರುವ ಗಾನವಿ ತೆಲುಗು ಸಿನಿಮಾ ರಂಗಕ್ಕೂ ಕಾಲಿಟ್ಟಾಗಿದೆ. ಅಜಯ್ ಕುಮಾರ್ ಗೌನಿ ನಿರ್ದೇಶನದ ಸಿನಿಮಾ ರುದ್ರಾಂಗಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಸಿನಿಮಾ ರಂಗದಲ್ಲಿ ಮಿಂಚಲಿದ್ದಾರೆ ಕಾಫಿ ನಾಡಿನ ಚೆಲುವೆ.

ಅಂದ ಹಾಗೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದಾಗ ಗಾನವಿಗೆ ಸಂತಸಕ್ಕಿಂತ ನರ್ವಸ್ ಆಗಿದ್ದೇ ಹೆಚ್ಚು. ಶೂಟಿಂಗ್ ಶುರುವಾದಾಗ ನರ್ವಸ್ ಮಾಯವಾಯಿತು. ರುದ್ರಾಂಗಿ ಮಹಿಳಾ ಪ್ರಧಾನ ಸಿನಿಮಾವಾಗಿದ್ದು ಅದರಲ್ಲಿ ಗಾನವಿ ಅವರು ರುದ್ರಾಂಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ

ಇನ್ನು ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಗಾನವಿ ಲಕ್ಷ್ಮಣ್ ಗೆ ನೃತ್ಯದತ್ತ ವಿಶೇಷ ಒಲವು. ಆ ಒಲವೇ ಆಕೆಯನ್ನು ನೃತ್ಯ ಶಿಕ್ಷಕಿಯಾಗುವಂತೆ ಪ್ರೇರಪಿಸಿತು. ತಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಕಲಿಸಿಕೊಟ್ಟ ಗಾನವಿಗೆ ಅದ್ಯಾವಾಗ ಕಲೆಯ ಮೇಲಿನ ಆಸಕ್ತಿ ಮಗದಷ್ಟು ಜಾಸ್ತಿಯಾಯಿತೋ ಆಗ ಕೆಲಸಕ್ಕೆ ವಿದಾಯ ಹೇಳಿದರು.

ಜೊತೆಗೆ ಬೇರೆ ಬೇರೆ ದೇಶಗಳಿಗೆ ಹೋಗಿ ಡಾನ್ಸ್, ಮಾರ್ಷಲ್ ಆರ್ಟ್ಸ್, ನಟನೆ ಇವೆಲ್ಲವನ್ನು ಹಂತಹಂತವಾಗಿ ಕಲಿತರು.
ನಟನೆಯನ್ನು ಕೊಂಚ ಕಲಿತ ಬಳಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಗಾನವಿಗೆ ನಟನೆಯತ್ತ ಆಸಕ್ತಿ ಮೂಡಿತು. ಧಾರಾವಾಹಿ ಆಡಿಶನ್ ಗಳಿಗೆ ಹೋಗಲಾರಂಭಿಸಿದ ಗಾನವಿ ಮಗಳು ಜಾನಕಿಯಾಗಿ ಬದಲಾದರು. ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಗಾನವಿ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ