ಲವ್ ಮಾಕ್ಟೈಲ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ನಟಿ ರಚನಾ ಇಂದರ್ ಈಗಂತೂ ಭರ್ಜರಿ ಬಿಜಿಯಾಗಿದ್ದಾರೆ.
ಹಲವಾರು ಸೂಪರ್ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಳ್ಳುವ ಸುವರ್ಣ ಅವಕಾಶ ಪಡೆದುಕೊಂಡಿರುವ ಈ ಚೆಂದುಳ್ಳಿ ಚೆಲುವೆ ಯಶಸ್ವಿ ಸಿನಿ ಪ್ರಯಾಣ ಮಾಡುತ್ತಿದ್ದಾರೆ.

ಅಂದ ಹಾಗೇ 2022 ವರ್ಷ ರಚನಾ ಇಂದರ್ ಗೆ ಬಹಳಷ್ಟು ಬ್ಯುಸಿ ಶೆಡ್ಯೂಲ್ ನೀಡಿದೆ ಎಂದರೆ ತಪ್ಪಾಗಲಾರದು. ತ್ರಿಬಲ್ ರೈಡಿಂಗ್, ಲವ್ 360 ಚಿತ್ರಗಳಲ್ಲಿ ನಟಿಸುತ್ತಿರುವ ಈಕೆ ನಟನೆಯ ಜೊತೆಗೆ ಎಂಬಿಎ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅದಿತಿ ಪ್ರಭುದೇವ್ ಹಾಗೂ ಮೇಘ ಶೆಟ್ಟಿ ಅವರ ನಟನೆಯಲ್ಲಿ ಮೂಡಿ ಬರುತ್ತಿರುವ ತ್ರಿಬಲ್ ರೈಡಿಂಗ್ ನಲ್ಲಿ ರಚನಾ ಇಂದರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಸಿನಿರಂಗದ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದಿರುವ ರಚನಾ ಇಂದರ್ ಗೆ ಈಗ ಮೇಲಿಂದ ಮೇಲೆ ಚಿತ್ರಗಳು ಬರುತ್ತಿರುವುದು ಸಂತಸದ ವಿಷಯ.

ನಟನೆಯಲ್ಲಿ ಮುಂದುವರೆದರೂ ಪರವಾಗಿಲ್ಲ ಆದರೆ ಓದಿನಲ್ಲಿ ಮಾತ್ರ ಹಿಂದೆ ಬೀಳಬಾರದು ಎಂಬ ಪೋಷಕರ ಕಂಡಿಷನ್ ಗೆ ಒಪ್ಪಿರುವ ರಚನಾ ಶಿಕ್ಷಣ ಹಾಗೂ ಚಿತ್ರಗಳನ್ನು ಬ್ಯಾಲೆನ್ಸ್ ಮಾಡುತ್ತಿರುವುದು ವಿಶೇಷ. ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ಶುರುವಾದ ಈಕೆ ಸೀನಿ ರಿಷಬ್ ಶೆಟ್ಟಿ ಅವರ ಜೊತೆ ‘ಹರಿಕಥೆ ಅಲ್ಲ ಇದು ಗಿರಿಕಥೆ’ ಚಿತ್ರದಲ್ಲಿ ನಟಿಸಿ ಜೊತೆಗೆ ನಿರ್ದೇಶಕ ಶಶಾಂಕ್ ಅವರ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

ಸದ್ಯ ತ್ರಿಬಲ್ ರೈಡಿಂಗ್ ಚಿತ್ರದ ಬಗ್ಗೆ ಮಾತನಾಡಿದ ಆಕೆ,”ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ನಟನೆಗೆ ಅವಕಾಶ ಸಿಕ್ಕಿದ್ದು ಬಹಳ ಸಂತಸ ತಂದಿದೆ. ಆನ್ ಸ್ಪಾಟ್ ಡೈಲಾಗ್ ಗಳನ್ನು ನೀಡಿದಾಗ ತುಸು ಕಷ್ಟವಾಗುತ್ತಿತ್ತು. ಗಣೇಶ್ ಸರ್ ಹಾಗೂ ರಂಗಾಯಣ ರಘು ಸರ್ ಮುಂದೆ ನಟಿಸುವಾಗ ತುಸು ಭಯವಾಗಿದ್ದು ಹೌದು. ಆದರೆ ಗಣೇಶ್ ಸರ್ ನನಗೆ ಒಳ್ಳೆಯ ರೀತಿಯಲ್ಲಿ ಕಾನ್ಫಿಡೆನ್ಸ್ ತುಂಬಿದರು. ಎಷ್ಟೇ ಟೇಕ್ ತೆಗೆದುಕೊಂಡರು ಏನೂ ಬೇಸರಿಸದೆ, ಪ್ರೋತ್ಸಾಹಿಸುತ್ತಿದ್ದರು. ಅವರಿದ್ದರೆ ಸೆಟ್ಟೆಲ್ಲ ನಗಾಡಿಕೊಂಡು ಖುಷಿ ಖುಷಿಯಂದಿರುತ್ತಿತ್ತು. ಅವರ ಜೊತೆ ನಟನೆಗೆ ಅವಕಾಶ ಸಿಕ್ಕಿದ್ದು ಒಂದು ಅದ್ಭುತ ಅನುಭವ” ಎಂದಿದ್ದಾರೆ.

ನಟನೆಯೊಂದಿಗೆ ಓದನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಈಕೆಯ ಸಿನಿ ಪ್ರಯಾಣ ಹೀಗೆ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸೋಣ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ