ಲವ್ ಮಾಕ್ಟೈಲ್ ಅದಿತಿಯಾಗಿ ಚಂದನವನಕ್ಕೆ ಕಾಲಿಟ್ಟ ರಚನಾ ಇಂದರ್ ಸದ್ಯ ಬಣ್ಣದ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಲವ್ ಮಾಕ್ಟೈಲ್ ನಂತರ ಲವ್ ಮಾಕ್ಟೈಲ್ 2 ಸಿನಿಮಾದಲ್ಲಿಯೂ ಅಭಿನಯಿಸಿ ಸಿನಿಪ್ರಿಯರನ್ನು ರಂಜಿಸಿದರು. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಮೋಡಿ ಮಾಡಿರುವ ರಚನಾ ಇಂದರ್ ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ದೇಶಕ ಶಶಾಂಕ್ ನಿರ್ದೇಶನದ ಲವ್ 360 ಯಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.
ಲವ್ 360 ಸಿನಿಮಾದಲ್ಲಿನ ನನ್ನ ಪಾತ್ರ ತುಂಬಾ ಸವಾಲಿನಿಂದ ಕೂಡಿದೆ ಎಂದು ಹೇಳುವ ರಚನಾ ಇಂದರ್ ಇದು ತುಂಬಾ ಢಿಪರೆಂಟ್ ಆಗಿರುವಂತಹ ಪಾತ್ರ. ಇಲ್ಲಿಯ ತನಕ ನಾನು ಇಂತಹ ಪಾತ್ರ ಮಾಡಿರಲಿಲ್ಲ ಎಂದು ಹೇಳುತ್ತಾರೆ.

“ನನಗೆ ಈ ಸಿನಿಮಾದಲ್ಲಿನ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂಚೂರು ಸಮಯ ಬೇಕಾಗಿತ್ತು. ಪಾತ್ರದ ಬಗ್ಗೆ ಪ್ರಶ್ನೆಗಳು ಬಂದಾಗ ನಾನು ನೇರವಾಗಿ ಶಶಾಂಕ್ ಸರ್ ಅವರ ಜೊತೆಯೇ ಕೇಳುತ್ತಿದ್ದೆ. ಸಿನಿಮಾ ಆರಂಭವಾಗುವ ಮೊದಲು ಸಾಕಷ್ಟು ವರ್ಕ್ ಶಾಪ್ ಕೂಡಾ ನಡೆಸಿದೆವು. ಅಲ್ಲಿಂದ ನನಗೆ ಕಾನ್ಫಿಡೆನ್ಸ್ ದೊರಕಿತು” ಎನ್ನುತ್ತಾರೆ ರಚನಾ ಇಂದರ್.
ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದಾಗ ರಚನಾ ಅವರಿಗೆ ಕೊಂಚ ನರ್ವಸ್ ಆಗಿತ್ತು. “ಮೊದಲಿಗೆ ಲವ್ 360 ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಾಗ ಭಯವಾಗಿತ್ತು. ಶಶಾಂಕ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ವಿಚಾರವೇ ಕೊಂಚ ಭಯ ಮೂಡಿಸಿತ್ತು. ವರ್ಕ್ ಶಾಪ್ ಆದ ಮೇಲೆ ಕಂಫರ್ಟೇಬಲ್ ಆಯಿತು” ಎಂದು ಹೇಳುತ್ತಾರೆ ರಚನಾ ಇಂದರ್.

“ಮುಖ್ಯವಾಗಿ ಮೊದಲಿಗೆ ನಾನು ಶಶಾಂಕ್ ಅವರಿಂದ ಶಿಸ್ತನ್ನು ಕಲಿತೆ. ಸಮಯವನ್ನು ಪಾಲನೆ ಮಾಡುವುದು ಹೇಗೆ ಎಂಬುದನ್ನು ಅರಿತೆ. ಜೊತೆಗೆ ಶೂಟಿಂಗ್ ಗೆ ಸರಿಯಾದ ಸಮಯಕ್ಕೆ ಹೋಗುವುದನ್ನು ಕೂಡಾ ರೂಢಿಸಿಕೊಂಡೆ. ನನ್ನ ಸಿನಿ ಕೆರಿಯರ್ ನಲ್ಲಿ ಇಂತಹ ಸಿನಿಮಾ ಸಿಕ್ಕಿರುವುದು ಸಂತಸ ನೀಡಿದೆ” ಎನ್ನುತ್ತಾರೆ ರಚನಾ.
ಸುದ್ದಿ ಕಳುಹಿಸಲು ಹಾಗೂ ಜಾಹೀರಾತುವಿಗಾಗಿ ಸಂಪರ್ಕಿಸಿ 9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ.