ನಮ್ಮ ಕನ್ನಡ ಚಿತ್ರರಂಗ ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಿದೆ. ಹೊಸ ಬಗೆಯ ಸಿನಿಮಾಗಳು, ಹೊಸ ಬಗೆಯ ಸಿನಿಕರ್ಮಿಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಸದ್ಯ ಎಲ್ಲೆಡೆ ಪ್ರಚಲಿತವಿರುವ ಪಾನ್ ಇಂಡಿಯಾ ಎಂಬ ಘಟ್ಟಕ್ಕೂ ಕೂಡ ನಮ್ಮ ಸ್ಯಾಂಡಲ್ ವುಡ್ ಅಗಾಧ ಕೊಡುಗೆ ನೀಡುತ್ತಲೇ ಇದೆ. ಹಲವು ಸಿನಿರಸಿಕರ ನೆಚ್ಚಿನ ಕೆಜಿಎಫ್ ಚಾಪ್ಟರ್ 1ರಿಂದ ಹಿಡಿದು, ಇತ್ತೀಚಿನ ಸೆನ್ಸೇಶನ್ ‘ಕಾಂತಾರ’ದ ವರೆಗೂ. 2022ನೇ ವರ್ಷ ಚಂದನವನಕ್ಕೆ ಚಿನ್ನದ ಕಾಲ ಎಂದರೆ ತಪ್ಪಾಗಲಾಗದು. ಈ ವರ್ಷ ಸ್ಯಾಂಡಲ್ ವುಡ್ ಗೆ ಮೆರುಗು ತಂದುಕೊಟ್ಟ ಪಾನ್ ಇಂಡಿಯನ್ ಸಿನಿಮಾಗಳು ಇವು.

ಕೆಜಿಎಫ್ ಚಾಪ್ಟರ್ 2
‘ಕೆಜಿಎಫ್’, ‘ರಾಕಿ ಭಾಯ್’,’ಅಧೀರ’,’ಗರುಡ’ ಇನ್ನೂ ಹತ್ತು ಹಲವು ಹೆಸರುಗಳು ಸಿನಿಪ್ರೇಮಿಗಳ ದೈನಂದಿನ ಬದುಕಿನ ಭಾಗವಾಗಿ ಹೋಗಿತ್ತು. ಪಾನ್ ಇಂಡಿಯಾ ಮಟ್ಟದಲ್ಲಿ 2018ರಲ್ಲಿ ಬಿಡುಗಡೆ ಕಂಡಿದ್ದ ‘ಕೆಜಿಎಫ್ ಚಾಪ್ಟರ್ 1’ ಹುಟ್ಟಿಸಿದ್ದ ಅಲೆಗೆ ಎರಡನೇ ಅಧ್ಯಾಯದ ಮೇಲೆ ಅಪಾರ ನಿರೀಕ್ಷೆ ಹುಟ್ಟಿತ್ತು. ಆ ನಿರೀಕ್ಷೆಗಳನ್ನೆಲ್ಲ ನಿಜ ಮಾಡುತ್ತಾ, ದಾಖಲೆಗಳನ್ನೆಲ್ಲ ಧೂಳಿಪಟ ಮಾಡುತ್ತಾ ಏಪ್ರಿಲ್ 14ರಂದು ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2, ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನ ಪಡೆಯಿತು. ರಾಕಿಂಗ್ ಸ್ಟಾರ್ ಯಶ್, ರವೀನ ಟಂಡನ್, ಸಂಜಯ್ ದತ್ ಮುಂತಾದ ಪ್ರಸಿದ್ಧ ನಟರು ನಟಿಸಿದ ಈ ಸಿನಿಮಾ ಕನ್ನಡದ ಜೊತೆಗೆ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ಬಿಡುಗಡೆಗೊಂಡಿತ್ತು. ಹಿಂದೆಂದೂ ಕೇಳಿರದ ಹಲವು ದಾಖಲೆಗಳಿಗೆ ಈ ಸಿನಿಮಾ ಕಾರಣವಾಗಿತ್ತು.

ಜೇಮ್ಸ್
ಕರ್ನಾಟಕ ರತ್ನ ಡಾ| ಪುನೀತ್ ರಾಜಕುಮಾರ್ ಅವರು ಪೂರ್ಣಪ್ರಮಾಣದ ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’. ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಮಾರ್ಚ್ 17ರಂದು ಬಿಡುಗಡೆಯಾಗಿ, ಮೊದಲ ದಿನವೇ 28ರಿಂದ 32ಕೋಟಿ ಗಳಿಸುವುದರ ಮೂಲಕ ಹೊಸ ದಾಖಲೆ ಬರೆದಿತ್ತು. ಕನ್ನಡ ಮಾತ್ರವಲ್ಲದೆ ಮಲಯಾಳಂ, ತೆಲುಗು, ತಮಿಳು ಹಾಗು ಹಿಂದಿ ಭಾಷೆಯಲ್ಲಿ ಪ್ರಪಂಚದಾದ್ಯಂತ ‘ಜೇಮ್ಸ್’ ಬಿಡುಗಡೆ ಕಂಡಿತ್ತು. ಅಪ್ಪು ಮೇಲಿನ ಅಭಿಮಾನಕ್ಕೆ ಕೋಟಿಗಟ್ಟಲೆ ಸಿನಿಪ್ರೇಮಿಗಳು ಚಿತ್ರಮಂದಿರಗಳ ಕಡೆಗೆ ಹೆಜ್ಜೆ ಹಾಕಿದ್ದರು.

777 ಚಾರ್ಲಿ
‘ಜೇಮ್ಸ್’ ಹಾಗು ಕೆಜಿಎಫ್ ಚಾಪ್ಟರ್ 2 ಪಕ್ಕಾ ಆಕ್ಷನ್ ಸಿನಿಮಾಗಳಾಗಿದ್ದರೆ, ಇದರ ನಂತರ ಚಂದನವನದಿಂದ ಬಂದ ಪಾನ್ ಇಂಡಿಯನ್ ಸಿನಿಮಾ ಒಂದು ಭಾವನಾತ್ಮಕ ಚಿತ್ರವಾಗಿತ್ತು. ಅದುವೇ ರಕ್ಷಿತ್ ಶೆಟ್ಟಿಯವರ ‘777 ಚಾರ್ಲಿ’. ಕಿರಣ್ ರಾಜ್ ಅವರ ನಿರ್ದೇಶನದ ಈ ಸಿನಿಮಾವನ್ನ ಪರಮ್ ವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿಯವರು ನಿರ್ಮಿಸಿ, ಕನ್ನಡ ಸೇರಿದಂತೆ ಪಂಚ ಭಾರತೀಯ ಭಾಷೆಗಳಲ್ಲಿ ಜೂನ್ 10ರಂದು ಬಿಡುಗಡೆ ಮಾಡಿದ್ದರು. ದೇಶವಿದೇಶಗಳಿಂದ ಅಪಾರ ಸಿನಿರಸಿಕರು ಚಿತ್ರದ ಬಗೆಗೆ ಮೆಚ್ಚುಗೆ ಸೂಚಿಸಿದ್ದರು. ಹಲವು ಪ್ರೇಕ್ಷಕರ ಕಣ್ಣಲ್ಲೂ ಈ ಚಿತ್ರ ನೀರು ತುಂಬಿಸಿತ್ತು. ‘777 ಚಾರ್ಲಿ’ ಚಿತ್ರಮಂದಿರ ಹಾಗು ಒಟಿಟಿ ಸೇರಿ ಸುಮಾರು 150ಕೋಟಿ ಗಳಿಸಿತ್ತು.

ವಿಕ್ರಾಂತ್ ರೋಣ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಅನೂಪ್ ಭಂಡಾರಿ ಜೋಡಿಯ ಮೋಡಿಯಲ್ಲಿ ಮೂಡಿಬಂದಂತಹ ‘ವಿಕ್ರಾಂತ್ ರೋಣ’ ಸಿನಿಮಾ ಸ್ಯಾಂಡಲ್ ವುಡ್ ನ ಅತೀ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು. ಕನ್ನಡದ ಜೊತೆಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ, 3ಡಿ ಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಜುಲೈ 28ರಂದು ತೆರೆಕಂಡ ಈ ಸಿನಿಮಾ ಪ್ರಪಂಚದಾದ್ಯಂತ ಸುಮಾರು 1600ಕ್ಕೂ ಹೆಚ್ಚು ಪರದೆಗಳ ಮೇಲೆ ಪ್ರದರ್ಶನ ಕಂಡಿತ್ತು. ಬಿಡುಗಡೆಯಾದ ಮೊದಲ ದಿನವೇ 35ಕೋಟಿ ಗಳಿಕೆ ಕಂಡಿದ್ದ ಹೆಗ್ಗಳಿಕೆ ಈ ಚಿತ್ರದ್ದು.

ಕಾಂತಾರ
ಇದೇ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ ಪ್ರಸ್ತುತ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಕನ್ನಡದ ಹೆಮ್ಮೆಯ ಚಿತ್ರ ‘ಕಾಂತಾರ’. ರಿಷಬ್ ಶೆಟ್ಟಿ ಅವರು ರಚಿಸಿ, ನಿರ್ದೇಶಿಸಿ, ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದರು. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಪ್ರಪಂಚದ ಹಲವೆಡೆ ತೆರೆಕಂಡ ಈ ಚಿತ್ರ, ಎಲ್ಲೆಡೆಯಿಂದ ಮೆಚ್ಚುಗೆ ಪಡೆಯುತ್ತಾ ಹೆಚ್ಚಿದ ಬೇಡಿಕೆಯ ಕಾರಣ, ಪಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಿಂದಿ ಆವೃತ್ತಿ ಬಿಡುಗಡೆಯಾಗಿದ್ದು, ತಮಿಳು, ತೆಲುಗು, ಹಾಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯ ಸಿದ್ಧತೆ ಬಹುಪಾಲು ಮುಗಿದಿವೆ. ‘ಕಾಂತಾರ’ ಸಿನಿಮಾ ಈಗಾಗಲೇ 100ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ