ಮನೋಜ್ಞ ನಟನೆಯ ಮೂಲಕ ಕನ್ನಡ ಸಿನಿ ಪ್ರಿಯರನ್ನು ರಂಜಿಸಿರುವ ಶಂಕರ್ ನಾಗ್ ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟರಲ್ಲಿ ಒಬ್ಬರು ಎಂಬುದಕ್ಕೆ ಸಂಶಯವಿಲ್ಲ. ನಟನೆಯಿಂದಲೇ ಸಾವಿರಾರು ಜನ ಅಭಿಮಾನಿಗಳನ್ನು ಪಡೆದಿರುವ ಶಂಕರ್ ನಾಗ್ ಅವರು ನಿರ್ದೇಶಕರಾಗಿಯೂ ಗುರುತಿಸಿಕೊಂಡ ಪ್ರತಿಭೆ. ಆಟೋರಾಜ ನಾಗಿ ಕರುನಾಡಿನಾದ್ಯಂತ ಗುರುತಿಸಿಕೊಂಡಿರುವ ಶಂಕರ್ ನಾಗ್ ಅವರ 68ನೇ ಜನ್ಮದಿನವಿಂದು.

ಶಂಕರ್ ನಾಗ್ ಅವರು ನಟನಾಗಿ ನಟಿಸಿದ ಸಿನಿಮಾಗಳ ಬಗ್ಗೆ ಅಕ್ಷರಶಃ ಸಿನಿಪ್ರಿಯರಿಗೆ ತಿಳಿದೇ ಇದೆ. ಇದೀಗ ಶಂಕರ್ ನಾಗ್ ಅವರು ನಿರ್ದೇಶಿಸಿರುವ ಸಿನಿಮಾಗಳು ಯಾವುದೆಲ್ಲಾ ಎಂಬುದನ್ನು ನಾವಿಂದು ನೋಡೋಣ.

ಮಿಂಚಿನ ಓಟ – ಮಿಂಚಿನ ಓಟ ಸಿನಿಮಾದ ಮೂಲಕ ನಟನಿಂದ ನಿರ್ದೇಶಕನಾಗಿ ಭಡ್ತಿ ಪಡೆದ ಶಂಕರ್ ನಾಗ್ ಇದರಲ್ಲಿ ನಟಿಸಿದ್ದರು ಎಂಬುದು ವಿಶೇಷ. ಅನಂತ್ ನಾಗ್, ಲೋಕನಾಥ್, ರಮೇಶ್ ಭಟ್ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿರುವ ಈ ಸಿನಿಮಾ ಎಂಟು ರಾಜ್ಯ ಪ್ರಶಸ್ತಿಯ ಜೊತೆಗೆ ಫಿಲಂಫೇರ್ ಪ್ರಶಸ್ತಿಯನ್ನು ಕೂಡಾ ಬಾಚಿಕೊಂಡಿತ್ತು.

ಜನ್ಮ ಜನ್ಮದ ಅನುಬಂಧ – ಪೂರ್ವ ಜನ್ಮದ ಕಥಾನಕವನ್ನು ಒಳಗೊಂಡಿರುವ ಜನ್ಮ ಜನ್ಮದ ಅನುಬಂಧ ಸಿನಿಮಾದ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಶಂಕರ್ ನಾಗ್ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅನಂತ್ ನಾಗ್ ಹಾಗೂ ಜಯಂತಿ ನಟಿಸಿರುವ ಈ ಸಿನಿಮಾದ ತಂಗಾಳಿಯಲ್ಲಿ ನಾನು ತೇಲಿಬಂದೆ ಹಾಡು ಆಗಿನ ಕಾಲದಲ್ಲಿ ಸಿನಿಪ್ರಿಯರ ಜೊತೆಗೆ ಸಂಗೀತ ಪ್ರಿಯರ ಮನವನ್ನು ಸೆಳೆದಿತ್ತು.

ಗೀತಾ – ಶಂಕರ್ ನಾಗ್ ರ ಅವರ ನಟನಾ ಬದುಕಿನಲ್ಲಿ ಅವರಿಗೆ ಜನಪ್ರಿಯತೆ ನೀಡಿದ್ದು ಗೀತಾ ಸಿನಿಮಾ. ಅದರಲ್ಲೂ ಆ ಸಿನಿಮಾದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡು ಈಗಲೂ ಎವರ್ ಗ್ರೀನ್ ಎಂದರೆ ಸುಳ್ಳಾಗಲಾರದು. ಶಂಕರ್ ನಾಗ್, ಪದ್ಮಾವತಿ ರಾವ್ ನಟಿಸಿರುವ ಈ ಸಿನಿಮಾ ಆಗಿನ ಕಾಲದಲ್ಲಿ ಸೂಪರ್ ಹಿಟ್ ಆಗಿರುವುದಂತೂ ನಿಜ.

ಹೊಸತೀರ್ಪು – ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಸಿನಿಮಾ ಎಂದರೆ ಹೊಸತೀರ್ಪು. ಅಂಬರೀಶ್ ,ಮಂಜುಳ , ಜಯಮಾಲ ,ಜಯಂತಿ , ಅನಂತ್ ನಾಗ್ ಅಭಿನಯಿಸಿರುವ ಈ ಸಿನಿಮಾದಲ್ಲಿ ಮಾಸ್ಟರ್ ಮಂಜುನಾಥ್ ಬಾಲನಟನಾಗಿ ಬಣ್ಣ ಹಚ್ಚಿದ್ದರು.

ನೋಡಿ ಸ್ವಾಮಿ ನಾವಿರೋದೆ ಹೀಗೆ – ಸಾಂಸಾರಿಕ ಹಾಸ್ಯ ಪ್ರಧಾನವಾಗಿರುವ ಈ ಸಿನಿಮಾದಲ್ಲಿ ರಮೇಶ್ ಭಟ್, ಅರುಂಧತಿನಾಗ್, ಶಂಕರನಾಗ್, ಮಾಸ್ಟರ್ ಮಂಜುನಾಥ್ ನಟಿಸಿದ್ದರು.

ಆಕ್ಸಿಡೆಂಟ್ – ಹಿಟ್ ಆ್ಯಂಡ್ ರನ್ ಪ್ರಕರಣದ ಕುರಿತಾಗಿರುವ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಹೌದು. 32ನೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಈ ಸಿನಿಮಾದಲ್ಲಿ ಶಂಕರ್ ನಾಗ್ ,ಅನಂತ್ ನಾಗ್ ,ರಮೇಶ್ ಭಟ್ ಅಭಿನಯಿಸಿದ್ದರು. ಮುಖ್ಯವಾದ ಸಂಗತಿಯೆಂದರೆ ಶಂಕರ್ ನಾಗ್ ಅವರು ಬರೀ ಎರಡು ತಿಂಗಳಿನಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದರು.

ಒಂದು ಮುತ್ತಿನ ಕಥೆ – ಶಂಕರ್ ನಾಗ್ ಅವರು ಕೊನೆಯದಾಗಿ ನಿರ್ದೇಶಿಸಿದ ಚಿತ್ರ ಒಂದು ಮುತ್ತಿನ ಕಥೆ. ವಿಭಿನ್ನ ಕಥಾಹಂದರದ ಮೂಲಕ ಸಿನಿಪ್ರಿಯರ ಮನ ಸೆಳೆದಿರುವ ಈ ಸಿನಿಮಾದಲ್ಲಿ ವರನಟ ಡಾ.ರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ