ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ನಿರೂಪಕ, ಗಾಯಕ ಇದು ಕಿಚ್ಚ ಸುದೀಪ್ ಅವರ ಸಂಕ್ಷಿಪ್ತ ಪರಿಚಯ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಸಿನಿಮಾ ರಂಗದಲ್ಲಿ ನಟನಾ ಛಾಪನ್ನು ಪಸರಿಸಿರುವ ಕಿಚ್ಚ ಸುದೀಪ್ ಇಂಜಿನಿಯರಿಂಗ್ ಪದವೀಧರ ಹೌದು. ಸುಧಾಕರ ಭಂಡಾರಿ ನಿರ್ದೇಶನದ ಪ್ರೇಮದ ಕಾದಂಬರಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಿಚ್ಚ ಸುದೀಪ್ ತಾಯವ್ವ ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು.

ಸುಮಾರು 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಮನೋಜ್ಞ ನಟನೆಯ ಮೂಲಕ ಸಿನಿಮಾ ವೀಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿರುವ “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ನಟನೆಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ. ನಟನಾ ಜಗತ್ತಿನಲ್ಲಿ ತಮ್ಮದೇ ಸ್ಟೈಲ್ ಮೂಲಕ ವೀಕ್ಷಕರನ್ನು ಸೆಳೆದಿರುವ ಕಿಚ್ಚ ಸುದೀಪ್ ಅವರಿಗೆ ದೊರಕಿರುವಂತಹ ಪ್ರಶಸ್ತಿಗಳು ಯಾವುದೆಲ್ಲಾ ಎಂಬುದನ್ನು ಇದೀಗ ತಿಳಿಯೋಣ.

ಅಭಿನಯ ಚಕ್ರವರ್ತಿ ಸುದೀಪ್ ಅವರ ಸಿನಿ ಜರ್ನಿಯಲ್ಲಿ ನಾಲ್ಕು ಫಿಲಂಫೇರ್ ಪ್ರಶಸ್ತಿ ದೊರಕಿದೆ. ಹುಚ್ಚ ಸಿನಿಮಾದ ನಟನೆಗಾಗಿ ಮೊದಲ ಫಿಲಂಫೇರ್ ಪ್ರಶಸ್ತಿ ಪಡೆದ ಕಿಚ್ಚ ಸುದೀಪ್ ಮುಂದಿನ ಎರಡು ವರ್ಷಗಳು ಕೂಡ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡಿದ್ದು ಸಾಧನೆಯೇ ಸರಿ. ‘ನಂದಿ’ ಹಾಗೂ ‘ಸ್ವಾತಿಮುತ್ತು’ ಸಿನಿಮಾದ ಅಭಿನಯಕ್ಕಾಗಿಯೂ ಅವರು ಫಿಲಂಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಮುಂದೆ ‘ಈಗ’ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಕೂಡಾ ಇವರಿಗೆ ಸಿಕ್ಕಿತ್ತು. ಇನ್ನು ಇದರ ಜೊತೆಗೆ ಹಲವು ಬಾರಿ ಸುದೀಪ್ ಅವರು ಫಿಲ್ಮ್‌ಫೇರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮಿನೇಟ್ ಕೂಡ ಆಗಿದ್ದರು ಎಂಬುದು ಸಂತಸದ ವಿಚಾರ.

ಫಿಲಂಫೇರ್ ಪ್ರಶಸ್ತಿ ಹೊರತಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ನಟ ಸುದೀಪ್ 2002-2003ರ ಸಾಲಿನ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಹೌದು, 2002 ರಲ್ಲಿ ತೆರೆ ಕಂಡ ‘ನಂದಿ’ ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿತ್ತು.

ಇನ್ನು ರಾಜಮೌಳಿ ನಿರ್ದೇಶನದ ಜನಪ್ರಿಯ ಸಿನಿಮಾ ‘ಈಗ’ದಲ್ಲಿ ಸುದೀಪ್ ಅವರು ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ್ದರು. ತೆಲುಗಿನ ಜೊತೆಗೆ ತಮಿಳು, ಹಿಂದಿಯಲ್ಲೂ ತೆರೆಕಂಡಿದ್ದ ಈ ಸಿನಿಮಾದ ನಟನೆಗೆ ಸುದೀಪ್ ಅವರು ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸೈಮಾ ಪ್ರಶಸ್ತಿ, ಸಿನಿಮಾ ಅವಾರ್ಡ್ಸ್, ಟೊರಂಟೋ ಫಿಲ್ಮ್‌ಫೆಸ್ಟಿವಲ್ ಅವಾರ್ಡ್, ನಂದಿ ಪ್ರಶಸ್ತಿ (ಖಳ ನಟ) ಹೀಗೆ ಸಾಲು ಸಾಲು ಪ್ರಶಸ್ತಿಗಳು ಸುದೀಪ್ ಅವರನ್ನು ಅರಸಿ ಬಂದಿತ್ತು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ