ಕನ್ನಡದ ಜನತೆಗೆಲ್ಲ ಗೊಂಬೆ ಎಂದೇ ಪರಿಚಯವಿರುವ ನೇಹಾ ಗೌಡ ಇತ್ತೀಚೆಗಷ್ಟೆ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ವಿಚಾರ ಹಲವರಿಗೆ ಬೇಸರ ತಂದಿರಬಹುದು. ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಆಗಿದ್ದ ನೇಹಾ ಕಳೆದ ವಾರವಷ್ಟೇ ಮನೆಯಿಂದ ಹೊರಬಂದರು. ಮನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ ನೇಹಾ, ಗೆದ್ದರೆ ರಾಕೇಶ್ ಅಡಿಗ ಗೆಲ್ಲಬೇಕು ಎಂದರು.

“ನಾನು ಈವರೆಗೆ ರಾಜಾ ರಾಣಿ, ತಕಧಿಮಿತ ಹೀಗೆ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೇನೆ ಆದರೆ ಬಿಗ್ ಬಾಸ್ ಮನೆಗೆ ಒಮ್ಮೆಯಾದರೂ ಹೋಗಬೇಕು ಅಂತ ಆಸೆ ಇತ್ತು. ಹಾಗಾಗಿ ಆಫರ್ ಬರುತ್ತಿದ್ದಂತೆ ನಾನು ನಟಿಸುತ್ತಿದ್ದ ತಮಿಳು ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡು ಬಂದೆ” ಎನ್ನುತ್ತಾರೆ.

ಇದರ ಜೊತೆಗೆ ” ನಾನು ಯಾವುದೇ ಪ್ಲಾನ್, ಸ್ಟ್ರಾಟಜಿ ಇಲ್ಲದೆ ನಾನು ನಾನಾಗಿಯೇ ಇಷ್ಟು ದಿನ ಅಲ್ಲಿದ್ದೆ. ಬಿಗ್ ಬಾಸ್ ಮನೆಯಲ್ಲಿ ಕಲಿತ ಪಾಠಗಳು ಹಲವು. ಮೊದಲೆಲ್ಲಾ ನನಗೆ ಯಾರಾದರೂ ಹರ್ಟ್ ಮಾಡಿದರೆ ಅವರಿಂದ ದೂರ ಉಳಿಯುತ್ತಿದ್ದೆ. ಆದರೆ ಈಗ ಅವರನ್ನೆದುರಿಸುವುದನ್ನು, ಅವರಿಗೆ ಸರಿಯಾಗಿ ಪ್ರತಿಕ್ರಿಯಿಸುವುದನ್ನು ಕಲಿತಿದ್ದೇನೆ” ಎಂದರು.

ಇನ್ನು “ಮೊದಲು ಒಮ್ಮೆ ಬಿಗ್ ಬಾಸ್ ಗೆ ಬಂದ ಸ್ಪರ್ಧಿಗಳಿಗೆ ಮುಂದೆ ಹೇಗೆ ಏನು ಅಂತ ಪ್ಲಾನ್ ಇರುತ್ತದೆ. ಅದಕ್ಕೆ ಸರಿಯಾಗಿ ಸ್ಟ್ರಾಟಜಿ ಇಟ್ಟುಕೊಳ್ಳಲು ಅವರಿಗೆ ಸುಲಭವಾಗುತ್ತದೆ. ರಾಕೇಶ್ ಅಡಿಗ ಒಬ್ಬ ಒಳ್ಳೆಯ ಸ್ಪರ್ಧಿ, ಯಾವಾಗ ಹೇಗೆ ಆಡಬೇಕು ಅಂತ ಚೆನ್ನಾಗಿ ಗೊತ್ತಿದೆ ಅವರಿಗೆ. ಅವರು ಗೆಲ್ಲುವ ಸಾಧ್ಯತೆಯೂ ಹೆಚ್ಚಿದೆ”ಎಂದರು.

35 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಹೊರಬರುವಾಗ ನೇಹಾ ಗೌಡ ಪ್ರಶಾಂತ ಸಂಬರಗಿಯವರನ್ನು ಮನೆಯಿಂದ ಹೊರಹೋಗಲು ನಾಮಿನೇಟ್ ಮಾಡಿದರು. ಈ ಬಗ್ಗೆ ಕೇಳಿದಾಗ “ಪ್ರಶಾಂತ ಸಂಬರಗಿ ಎಲ್ಲಾ ವಿಚಾರಕ್ಕೂ ಉದ್ವೇಗಗೊಳ್ಳುತ್ತಾರೆ. ಯಾವಾಗಲೂ ಇನ್ನೊಬ್ಬರ ಜೊತೆ ಚರ್ಚೆಗೆ ಬೀಳುವುದಕ್ಕೆ ಕಾಯುತ್ತಿರುತ್ತಾರೆ” ಎಂದರು.

ಕೊನೆಯದಾಗಿ “ಇಷ್ಟು ಬೇಗ ಹೊರಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಯಾಕೆಂದರೆ ನಾನು ಯಾವುದೇ ನಾಟಕ ಮಾಡಿರಲಿಲ್ಲ. ಕ್ಯಾಮೆರಾ ಮುಂದೆ ಹೋಗಿ ಮಾತನಾಡುವುದು, ಬೇರೆ ಸ್ಟ್ರಾಟಜಿ ಇತ್ಯಾದಿ ಯಾವುದೂ ಇರಲಿಲ್ಲ. ಆದರೆ ಇತ್ತೀಚೆಗೆ ಸ್ವಲ್ಪ ಇಮೋಷನಲ್ ಆದೆನೇನೋ ಹೊರಬಂದಿದ್ದೀನಿ. ಒಟ್ಟಿನಲ್ಲಿ ಬಿಗ್ ಬಾಸ್ ಒಂದು ಅದ್ಭುತ ಅನುಭವವಂತೂ ಹೌದು” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ