ಕುಲವಧು ಧಾರಾವಾಹಿಯಲ್ಲಿ ವಚನಾ ಆಗಿ ನಟಿಸಿ ಕಿರುತೆರೆ ಜಗತ್ತಿನಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿದ್ದ ಗುಂಗುರು ಕೂದಲಿನ ಸುಂದರಿ ಅಮೃತಾ ರಾಮಮೂರ್ತಿ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಮೋಡಿ ಮಾಡಿದರು. ಕಸ್ತೂರಿ ನಿವಾಸ ಧಾರಾವಾಹಿಯ ಮೃದುಲಾ ಪಾತ್ರದಿಂದ ಹೊರಬಂದಿದ್ದ ಅಮೃತಾ ತಾಯಿಯಾಗುತ್ತಿರುವ ಸಿಹಿ ಸುದ್ದಿ ನೀಡಿದ್ದರು. ಮುದ್ದು ಮಗಳು ಧೃತಿಗೆ ಜನ್ಮ ನೀಡಿದ್ದ ಅಮೃತಾ ಇದೀಗ ನಟನಾ ಕ್ಷೇತ್ರದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿನ್ನೆಯಿಂದ ಶುರುವಾಗಿರುವ ಹೊಚ್ಚ ಹೊಸ ಧಾರಾವಾಹಿ ಕೆಂಡಸಂಪಿಗೆಯಲ್ಲಿ ಖಳನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗುತ್ತಿದ್ದಾರೆ ಅಮೃತಾ ರಾಮಮೂರ್ತಿ.

“ಮಗಳು ಧೃತಿಗೆ ಎರಡೂವರೆ ತಿಂಗಳಿರುವಾಗ ಕೆಂಡಸಂಪಿಗೆ ಧಾರಾವಾಹಿ ತಂಡ ನನ್ನನ್ನು ಸಂಪರ್ಕಿಸಿ ನಟಿಸಲು ತಯಾರಿದ್ದೀರಾ ಎಂದು ಕೇಳಿದ್ದರು. ನೆಗೆಟಿವ್ ಪಾತ್ರ ಎಂದು ತಿಳಿಯಿತು. ನನ್ನ ಕಿರುತೆರೆ ಕೆರಿಯರ್ ನಲ್ಲಿ ಇದೇ ಮೊದಲ ಬಾರಿ ಇಂತಹ ಪಾತ್ರ ಸಿಕ್ಕಿತ್ತು. ಇಲ್ಲಿಯ ತನಕ ನಾನು ಹೋಮ್ಲಿ ಆಗಿರುವಂತಹ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಆದ ಕಾರಣ ಆಫರ್ ಬಂದಾಗ ಸರಿ ಎಂದು ಹೇಳಿದೆ” ಎಂದು ಹೇಳುತ್ತಾರೆ ಅಮೃತಾ ರಾಮಮೂರ್ತಿ.
“ಆಧುನಿಕ ಮಹಿಳೆಯಾಗಿ ನಾನು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೇನೆ. ಕುಟುಂಬದ ವ್ಯವಹಾರವನ್ನು ಸ್ವಾಧೀನ ಪಡಿಸಿಕೊಳ್ಳುವುದೇ ಆಕೆಯ ಮುಖ್ಯ ಗುರಿ. ವೃತ್ತಿಜೀವನಕ್ಕೆ ಅವಳ ಮೊದಲ ಆದ್ಯತೆ. ಅದಕ್ಕಾಗಿ ಆಕೆ ಯಾವುದೇ ಹಂತಕ್ಕೆ ಹೋಗಲು ತಯಾರಿರುತ್ತಾಳೆ” ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಅಮೃತಾ.

ಕಳೆದ ಒಂದು ದಶಕಗಳಿಂದ ಕಿರುತೆರೆ ಜಗತ್ತಿನಲ್ಲಿ ಸಕ್ರಿಯರಾಗಿರುವ ಅಮೃತಾ ರಾಮಮೂರ್ತಿ ಅವರು ಪತ್ರಿಕೋದ್ಯಮ ಪದವೀಧರೆ. ಪದವಿಯ ಬಳಿಕ
ಸಮಯ ಟಿವಿಯ ಫಿಲಂ ಬ್ಯೂರೋ ನಲ್ಲಿ ಸೆಕೆಂಡ್ ಶೋ ಎನ್ನುವ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಅಮೃತಾ ರಾಮಮೂರ್ತಿ ಬದುಕು ರೂಪಿಸಿಕೊಂಡಿದ್ದು ನಟನೆಯಲ್ಲಿ.
ಸ್ಡಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಸ್ವತಿ ಲಕ್ಷ್ಮಿ ಪ್ರಿಯೆ ಧಾರಾವಾಹಿಯ ಲಕ್ಷ್ಮಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅಮೃತಾ ಮುಂದೆ ಜೀ ಕನ್ನಡ ವಾಹಿನಿಯ ಮೇಘ ಮಯೂರಿ ಧಾರಾವಾಹಿಯ ಮಯೂರಿ ಆಗಿ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದರು. ತದ ನಂತರ ಜೀ ಕನ್ನಡ ವಾಹಿನಿಯ ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯ ಐಶ್ವರ್ಯ ಆಗಿ ನಟಿಸಿದ್ದ ಈಕೆ ಮುಂದೆ ಕಾಣಿಸಿಕೊಂಡಿದ್ದು ವಚನಾ ಆಗಿ.

ಕುಲವಧು ಧಾರಾವಾಹಿಯ ವಚನಾ ಆಗಿ ಮೂರು ವರ್ಷಗಳ ಕಾಲ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದ ಅಮೃತಾ ಕಸ್ತೂರಿ ನಿವಾಸದ ಮೃದುಲಾ ಆಗಿ ಅಭಿನಯಿಸಿದರು. ಇದರ ಜೊತೆಗೆ ಸೈಕೋ ಶಂಕರ ಹಾಗೂ ತುರ್ತು ನಿರ್ಗಮನ ಸಿನಿಮಾಗಳಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿಯೂ ಸದ್ದು ಮಾಡುತ್ತಿರುವ ಅಮೃತಾ ರಾಮಮೂರ್ತಿ ವರ್ಷಗಳ ನಂತರ ಮರಳಿ ಬರುತ್ತಿರುವುದು ವೀಕ್ಷಕರಿಗೆ ಸಂತಸ ತಂದಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ