ತಮ್ಮ ಭವಿಷ್ಯ ವಾಣಿಯಿಂದ ಹೆಸರುವಾಸಿಯಾಗಿರುವ ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ (Prediction). ಅರಸೀಕೆರೆ ತಾಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಮಳೆಯ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ.
ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು, ಮಿಂಚು, ಗಾಳಿ, ಮಳೆ, ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ. ಬಯಲು ಸೀಮೆ ಮಲೆನಾಡಾಗುತ್ತದೆ, ಮಲೆನಾಡು ಬಯಲು ಸೀಮೆಯನ್ನು ಬಯಸುತ್ತದೆ. ಇದು ಮುಂದುವರಿಯುತ್ತದೆ. ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡೀತು ಭೂಮಿ ಕಂಪಿಸುತ್ತೆ, ಗುಡ್ಡಗಳು ಕುಸಿಯುತ್ತವೆ. ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ. ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ. ಮುಂಗಾರು ಮಳೆ ಕಳೆದ ಮೇಲೆ, ಹಿಂಗಾರು ಕಡಿಮೆಯಾಗುತ್ತದೆ. ಆದರೆ ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ.
ರಾಜಕೀಯದಲ್ಲಿ ಕಲಹಗಳಾಗುತ್ತವೆ
ಆಶ್ವೀಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗ ರುಜನಗಳು ಹೆಚ್ಚುತ್ತವೆ, ಕಳ್ಳಕಾಕರ ಕಾಟಗಳು, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚಾಗಿ ಅಂತರಾಷ್ಟ್ರೀಯ ವಿಕೋಪಕ್ಕೆ ತುತ್ತಾಗುತ್ತದೆ. ಎಲ್ಲವೂ ಇನ್ನೂ ಇದೆ, ಇನ್ನೂ ಹೆಚ್ಚುತ್ತದೆ. ರಾಜಕೀಯದಲ್ಲಿ ಕಲಹಗಳಾಗುತ್ತವೆ, ಗುಂಪುಗಳಾಗುತ್ತವೆ. ಮಳೆ ಬರುತ್ತೆ ಬೆಳೆ ಸಿಕ್ಕಲ್ಲ, ಬೆಳೆ ಬರುತ್ತೆ ಮಳೆ ತಿಂದಾಕುತ್ತದೆ. ಶುಭಕೃತನಾಮ ಸಂವತ್ಸದ ಫಲ ಅಶುಭವಾಗಿರುತ್ತದೆ. ಬಲಾಢ್ಯ ಪೃಥ್ವಿ ಹೆಚ್ಚುತ್ತ ಹೋಗುತ್ತದೆ. ಆಕಾಶ ಎಲ್ಲಿ ಬೇಕು ಅಲ್ಲಿ ಘರ್ಜಿಸುತ್ತೆ ಕಂಡಮಂಡಲ ಆಗುತ್ತೆ. ದೊಡ್ಡದೊಡ್ಡ ಪಟ್ಟಣಗಳಿಗೆ ಭಂಗವಾಗುತ್ತೆ. ಮತೀಯ ಗಲಭೆ ಇನ್ನೂ ಹೆಚ್ಚಾಗುತ್ತೆ. ಸಾವು ನೋವು ಇನ್ನೂ ಜಾಸ್ತಿ ಆಗುತ್ತೆ, ಅಶಾಂತಿ ಇದೆ.
ಕಾರ್ತೀಕ ಆಶ್ವೀಜದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಗೊಂದಲಗಳು, ಸಾವು ನೋವುಗಳು ಆಗುವ ಲಕ್ಷಣ ಬಹಳ ಇದೆ. ಜನ ತಲ್ಲಣಗೊಳ್ಳುತ್ತಾರೆ, ಈ ತಿಂಗಳವರೆಗೂ ಕಾದುನೋಡಿ. ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ. ಗಾಳಿ, ಮಳೆ, ವೃಕ್ಷಗಳು ಮರಿದು ಬೀಳುತ್ತವೆ. ವಿಪರೀತ ಮಿಂಚು ಗಾಳಿಯಾಗುತ್ತದೆ, ಸಾವು-ನೋವು ಹೆಚ್ಚಾಗುತ್ತದೆ, ಶುಭವಾದದ್ದಲ್ಲ. ಜಲಾಶಯಗಳು ತುಂಬಿ ಹರಿಯುತ್ತವೆ. ಕೆಲವು ಕಡೆ ಮಳೆ ಹೋದರೆ ಸಾಕು ಅಂತಾರೆ, ಕೆಲವು ಕಡೆ ಮಳೆ ಬೇಕು ಅಂತಾರೆ ಎಂದು ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.