ಸದ್ಯ ಕರುನಾಡಿನ ಎಲ್ಲೆಡೆ ಕೇಳಿಬರುತ್ತಿರುವ ಒಂದು ಸಿನಿಮಾ ‘ಕಾಂತಾರ’. ರಿಷಬ್ ಶೆಟ್ಟಿ ರಚಿಸಿ ನಿರ್ದೇಶಿಸಿ ನಟಿಸಿರುವ ಈ ಸಿನಿಮಾ ಎಲ್ಲರ ಮೆಚ್ಚುಗೆ ಪಡೆಯುತ್ತಾ ಭರದಿಂದ ಮುನ್ನುಗ್ಗುತ್ತಿದೆ. ಮೆಚ್ಚುಗೆಯ ಮಹಾಪೂರ ಎಲ್ಲೆಡೆಯಿಂದ ಪಡೆಯುತ್ತಿರುವ ಚಿತ್ರತಂಡ, ಪ್ರೇಕ್ಷಕರಿಂದ ಹಿಡಿದು ಹಲವು ಕನ್ನಡ ಹಾಗು ಪರಭಾಷೆಯ ಸ್ಟಾರ್ ನಟ-ನಿರ್ದೇಶಕರುಗಳಿಂದ ಪ್ರಶಂಸೆ ಪಡೆಯುತ್ತಿದೆ. ಸದ್ಯ ಸಿನಿಮಾ ನೋಡಿ ಮೆಚ್ಚಿಕೊಂಡ ಗಣ್ಯರ ಸಾಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೇರಿದ್ದಾರೆ. ಚಿತ್ರವನ್ನ ನೋಡಿ ಇಷ್ಟ ಪಡುವುದಷ್ಟೇ ಅಲ್ಲದೇ ಚಿತ್ರತಂಡಕ್ಕೆ ಪತ್ರವೊಂದನ್ನು ಬರೆದಿದ್ದಾರೆ.

ಬಾದ್ ಶಾ ಕಿಚ್ಚ ಸುದೀಪ್ ಅವರು ಹಲವು ಉತ್ತಮ ಸಿನಿಮಾಗಳನ್ನ ಕನ್ನಡಿಗರಿಗೆ ನೀಡಿದವರು. ಅಷ್ಟೇ ಅಲ್ಲದೇ ಉತ್ತಮ ಸಿನಿಮಾಗಳನ್ನ, ಕಲಾವಿದರನ್ನ ಗುರುತಿಸಿ ಹರುಷ ತೋರುವವರು. ಸದ್ಯ ಇವರು ಚಿತ್ರಮಂದಿರಗಳಲ್ಲಿ ‘ಕಾಂತಾರ” ಸಿನಿಮಾವನ್ನ ನೋಡಿದ್ದು, ಸಿನಿಮಾ ಬಹುವಾಗಿ ಇಷ್ಟವಾಗಿ, ಚಿತ್ರತಂಡಕ್ಕೆ ಪ್ರಶಂಸೆಯ ಪತ್ರವೊಂದನ್ನು ಬರೆದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಈ ಪತ್ರ ಬರೆಯುವಂತೆ ಮಾಡಿದ ತಂಡಕ್ಕೆ ಎಂಬ ಮಾತಿನಿಂದ ಆರಂಭಿಸಿ, ನಾವೇಷ್ಟೋ ಒಳ್ಳೆಯ ಸಿನಿಮಾಗಳನ್ನ ಕಂಡಿರುತ್ತೇವೆ, ಆದರೆ ಇದು ಮಾತನ್ನೇ ಮರೆಸಿಬಿಡುವಂತಹ ಚಿತ್ರ. ಒಂದು ಪುಟ್ಟ ಕಥೆಯನ್ನು ಅದ್ಭುತ ಕಥಾಹಂದರವಾಗಿ ತೆರೆಮೇಲೆ ತಂಡ ತಂಡಕ್ಕೆ ನನ್ನದೊಂದು ಅಭಿನಂದನೆ. ರಿಷಬ್ ಶೆಟ್ಟಿಯವರ ನಟನೆಯಂತೂ ಅದ್ಭುತ. ಈ ಚಿತ್ರದಲ್ಲಿ ತಪ್ಪು ಹುಡುಕುವುದು ಬಹಳ ಕಷ್ಟ. ಸುಮ್ಮನೆ ಸೀಟಿಗೆ ಒರಗಿ ಕುಳಿತು, ಈ ಸಿನಿಮಾವನ್ನ ಅನುಭವಿಸಬೇಕು. ಪೇಪರ್ ಮೇಲೆ ಬರೆದ ರೀತಿಗಿಂತ ಭಿನ್ನವಾಗಿ, ಉತ್ತಮವಾಗಿ ಸಿನಿಮಾ ತೆರೆಮೇಲೆ ಬಂದಿರುತ್ತದೆ. ಈ ಸಿನಿಮಾ ನಿರ್ದೇಶಕರ ಕ್ರೀಯಾಶೀಲತೆಗೆ ಒಂದು ಉತ್ತಮ ಉದಾಹರನೆ” ಎಂದು ಹೇಳುತ್ತಾ ಇನ್ನಷ್ಟು ಪದಗಳಿಂದ ತಮ್ಮ ಮನದ ಮಾತನ್ನ ಹಂಚಿಕೊಂಡರು ಸುದೀಪ್. ಇದರ ಜೊತೆಗೆ ಚಿತ್ರದ ಸಂಗೀತಕ್ಕೆ ಅಜನೀಶ್ ಲೋಕನಾಥ್ ಅವರನ್ನು ಕೂಡ ಕಿಚ್ಚ ಮನದುಂಬಿ ಹೊಗಳಿದ್ದಾರೆ.

“ಈ ಚಿತ್ರದ ಬಗ್ಗೆ ಹಲವರು ಉತ್ತಮ ಅಭಿಪ್ರಾಯಗಳನ್ನು ನನ್ನ ಬಳಿ ತಂದಿದ್ದರಿಂದ ಸಿನಿಮಾ ನೋಡಬೇಕೆಂದು ಬಂದೆ. ಇದು ಎಲ್ಲಾ ವಿಮರ್ಶೆ, ಹೊಗಳಿಕೆ, ತರ್ಕವನ್ನೆಲ್ಲ ಮೀರಿಸುವಂತಹ ಸಿನಿಮಾ” ಎನ್ನುತ್ತಾರೆ ಸುದೀಪ್. ಸದ್ಯ ಸುದೀಪ್ ಬರೆದ ಈ ಪತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕನ್ನಡ ಸಿನಿಪ್ರೇಮಿಗಳಿಂದ ದೊರೆಯುತ್ತಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ