ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾದಲ್ಲಿ ನಾಯಕಿ ಗೌರಿ ಶೆಟ್ಟಿಯಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಕರಾವಳಿ ಕುವರಿ ಮಾನ್ವಿತಾ ಕಾಮತ್ ಪತ್ರಿಕೋದ್ಯಮ ಪದವೀಧರೆ ಹೌದು. ಪದವಿಯ ಬಳಿಕ ರೆಡಿಯೋ ಜಾಕಿಯಾಗಿ ವೃತ್ತಿ ಜೀವನ ಶುರು ಮಾಡಿದ ಮಾನ್ವಿತಾ ಕಾಮತ್ ಕಿಲಾಡಿ 983 ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದರು.
ಮುಂದೆ ಕೆಂಡಸಂಪಿಗೆ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಮಾನ್ವಿತಾ ಕಾಮತ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಚೌಕ, ಕನಕ, ಟಗರು, ತಾರಕಾಸುರ, ರಿಲ್ಯಾಕ್ಸ್ ಸತ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಷ್ಟೇ ಮಾನ್ವಿತಾ ಕಾಮತ್ ಅಭಿನಯಿಸಿದ್ದರೂ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದರು.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಈಕೆ ಇದೀಗ ‘ಶಿವ 143’ ಸಿನಿಮಾದ ಮೂಲಕ ಕಂ ಬ್ಯಾಕ್ ಆಗುತ್ತಿದ್ದಾರೆ. ಎರಡು ವರ್ಷದ ನಂತರ ನಟನೆಗೆ ಮರಳಿರುವ ಮಾನ್ವಿತಾ ಕಾಮತ್ ಶಿವ 143 ಸಿನಿಮಾದಲ್ಲಿ ಬೋಲ್ಡ್ ಲುಕ್ ಮೂಲಕ ವೀಕ್ಷಕರ ಮನ ಸೆಳೆಯಲಿದ್ದಾರೆ.

ತೆಲುಗಿನ ಸ್ಲೀಪರ್ ಹಿಟ್ ಸಿನಿಮಾ ‘ಆರ್‌ಎಕ್ಸ್ 100’ ಚಿತ್ರದ ರಿಮೇಕ್ ಆಗಿರುವ ಇದರಲ್ಲಿ ಮಾನ್ವಿತಾ ವಿಭಿನ್ನ ಲುಕ್ ಮೂಲಕ ಮೋಡಿ ಮಾಡಲಿದ್ದಾರೆ. “ಈ ಪಾತ್ರಕ್ಕೆ ಜೀವ ತುಂಬುತ್ತಿರುವುದು ನನಗೆ ಖುಷಿ ನೀಡಿದೆ. ಬಹಳ ಉತ್ಸಾಹದಿಂದ ನಾನು ಈ ಪಾತ್ರವನ್ನು ಮಾಡುತ್ತಿದ್ದೇನೆ. ನನ್ನನ್ನು ತೆರೆ ಮೇಲೆ ನೋಡಲು ನಾನು ಕಾತರಳಾಗಿದ್ದೇನೆ. ಮಾತ್ರವಲ್ಲ ಜನರು ನನ್ನ ಪಾತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾತರಳಾಗಿದ್ದೇನೆ” ಎಂದು ಹೇಳುತ್ತಾರೆ ಮಾನ್ವಿತಾ ಕಾಮತ್.

ಧೀರೇನ್ ರಾಮ್‌ಕುಮಾರ್ ಅವರೊಂದಿಗೆ ನಟಿಸುವುದು ಖುಷಿಕರವಾಗಿದೆ ಎಂದು ಹೇಳಿರುವ ಮಾನ್ವಿತಾ ಕಾಮತ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಸಿನಿ ಪ್ರಿಯರು ಕಾಯುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ