ಸದ್ಯ ಭಾರತೀಯ ಚಿತ್ರರಂಗದ ಎಲ್ಲೆಡೆ ಕೇಳಿ ಬರುತ್ತಿರುವ ಒಂದೇ ಹೆಸರು ‘ಕಾಂತಾರ’. ನಮ್ಮ ಕರುನಾಡ ಕರಾವಳಿಯ ಸಂಪ್ರದಾಯಗಳನ್ನು ಒಳಗೊಂಡಂತಹ ಒಂದು ಅದ್ಭುತ ಕಥೆಯನ್ನು ಅಷ್ಟೇ ಅದ್ಭುತವಾಗಿ ತೆರೆಮೇಲೆ ತಂದಂತಹ ಕೀರ್ತಿ ರಿಷಬ್ ಶೆಟ್ಟಿಯವರದ್ದು. ಅದೇ ಕಾರಣಕ್ಕೆ ಸದ್ಯ ವಿವಿಧ ಭಾಗಗಳಿಂದ ಪ್ರಶಂಸೆಯ ಮಹಪೂರ ಚಿತ್ರತಂಡವನ್ನ ಹುಡುಕಿಕೊಂಡು ಬರುತ್ತಿದೆ.

ಪ್ರಪಂಚದಾದ್ಯಂತ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾಗೆ ಎಲ್ಲೆಡೆಯಿಂದ ಬೇಡಿಕೆ ಏರುತ್ತಿದ್ದೂ, ಹಿಂದಿ, ತೆಲುಗು,ಮಲಯಾಳಂ ಹಾಗು ತಮಿಳು ಭಾಷೆಗೂ ಡಬ್ ಆಗುತ್ತಿದೆ. ಈಗಾಗಲೇ ಹಿಂದಿ ಹಾಗೂ ತೆಲುಗು ಆವೃತ್ತಿಯ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆಕಾಣಲಿದೆ. ಅದರಲ್ಲೂ ಬಾಲಿವುಡ್ ನ ತೆರೆಗಳ ಮೇಲೆ ದಾಖಲೆಯ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ ನಮ್ಮ ಕನ್ನಡದ ಹೆಮ್ಮೆಯ ‘ಕಾಂತಾರ’.

ಈಗಾಗಲೇ ಮುಂಬೈ ನ ಮರಾಠ ಥೀಯೇಟರ್ ನಲ್ಲಿ ಹೌಸ ಫುಲ್ ಶೋ ಪಡೆದ ಮೊದಲ ಹಿಂದಿ ಭಾಷೆಯದಲ್ಲದ ಸಿನಿಮಾ ಎಂಬ ಹೆಗ್ಗಳಿಕೆ ‘ಕಾಂತಾರ’ದ ಮುಡಿಗೇರಿದೆ. ಸದ್ಯ ಇದೇ ಅಕ್ಟೋಬರ್ 14ರಿಂದ ಎಲ್ಲೆಡೆ ಹಿಂದಿ ಭಾಷೆಯ ಆವೃತ್ತಿ ಬಿಡುಗಡೆಯಾಗಲಿದ್ದು, ಬಾಲಿವುಡ್ ನ ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಥೀಯೇಟರ್ ಗಳಲ್ಲಿ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಈಗಾಗಲೇ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಹಿಂದಿ ಭಾಷೆಯಲ್ಲೂ ದಾಖಲೆ ಬರೆದಿದ್ದು, ‘ಕಾಂತಾರ’ ಕೂಡ ಅದೇ ಹಾದಿ ಹಿಡಿದ ಹಾಗಿದೆ.

ರಿಷಬ್ ಶೆಟ್ಟಿ ರಚಿಸಿ ನಿರ್ದೇಶಿಸಿ, ನಟಿಸಿರುವ ಈ ‘ಕಾಂತಾರ’ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಪ್ರಪಂಚದಾದ್ಯಂತ ಕನ್ನಡ ಭಾಷೆಯಲ್ಲಷ್ಟೇ ಬಿಡುಗಡೆಯಾಗಿತ್ತು. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲಂಸ್’ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಡುಗಡೆಯಾದ ಎರಡನೇ ವಾರಾಂತ್ಯಕ್ಕೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ಇತರೆ ಪಾನ್ ಇಂಡಿಯನ್ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ