ಸದ್ಯ ಭಾರತದಾದ್ಯಂತ ಸದ್ದು ಮಾಡುತ್ತಿರುವ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ‘ಕಾಂತಾರ’. ಕನ್ನಡ ಭಾಷೆಯಲ್ಲಷ್ಟೇ ಬಿಡುಗಡೆ ಕಂಡು ಇಡೀ ಪ್ರಪಂಚದೆಲ್ಲೆಡೆ ಅಪಾರ ಮೆಚ್ಚುಗೆ ಪಡೆಯುತ್ತಿರುವ ಈ ಸಿನಿಮಾ ಎಲ್ಲೆಡೆ ದಾಖಲೆಗಳನ್ನು ಬರೆಯುತ್ತಿದೆ. ತಮ್ಮ ನಿರ್ದೇಶನ, ನಟನೆ ಎಲ್ಲದಕ್ಕೂ ಎಲ್ಲೆಡೆಯಿಂದ ಪ್ರಶಂಸೆ ಪಡೆಯುತ್ತಿದ್ದಾರೆ ರಿಷಬ್ ಶೆಟ್ಟಿ. ಬಿಡುಗಡೆಯಾದ ಎಲ್ಲಾ ಭಾಗಗಳಲ್ಲೂ ಯಶಸ್ವಿ ಪ್ರದರ್ಶನ ಪಡೆಯುತ್ತಿದ್ದು, ಸಿನಿಮಾ ಕಂಡಂತಹ ಪ್ರತಿಯೊಬ್ಬ ವೀಕ್ಷಕನಿಗೆ ರೋಮಾಂಚನ ನೀಡುತ್ತಿದೆ. ಸದ್ಯ ವಿವಿಧ ಆನ್ಲೈನ್ ಅಂಕಣಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ.

‘ಬುಕ್ ಮೈ ಶೋ’ ಅತಿಪ್ರಸಿದ್ಧ ಸಿನಿಮಾ ಟಿಕೆಟ್ ಬುಕಿಂಗ್ ಮಾಡುವಂತಹ ಆಪ್ ಆಗಿದೆ. ಸಿನಿಮಾ ವೀಕ್ಷಿಸಿದ ಸಿನಿಪ್ರಿಯರು, ಆ ಚಿತ್ರಕ್ಕೆ ರೇಟಿಂಗ್ ನೀಡುವುದಕ್ಕೆ ಕೂಡ ಇದರಲ್ಲಿ ಅವಕಾಶವಿರುತ್ತದೆ. ಈ ರೀತಿ ಬಂದ ರೇಟಿಂಗ್ ಗಳು ಸಿನಿಮಾದ ಬಗೆಗೆ ತಿಳಿದುಕೊಳ್ಳಲು ಉಳಿದ ಪ್ರೇಕ್ಷಕರಿಗೆ ಸಹಾಯಕವಾಗುತ್ತದೆ. ಸದ್ಯ ‘ಕಾಂತಾರ’ ಸಿನಿಮಾ ಸುಮಾರು 99%ದಷ್ಟು ರೇಟಿಂಗ್ ಅನ್ನು ‘ಬುಕ್ ಮೈ ಶೋ’ ನಲ್ಲಿ ಪಡೆದುಕೊಂಡಿದೆ. ಅದು ಕೂಡ ಸುಮಾರು 25 ಸಾವಿರ ಜನರು ವೋಟ್ ಮಾಡಿದ ಬಳಿಕ.

‘ಬುಕ್ ಮೈ ಶೋ’ ಆಪ್ ನಲ್ಲಿ ಈ ರೀತಿಯ ಸಾಧನೆ ಮಾಡಿದ ಏಕೈಕ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಸಿನಿಮಾ ಪಾತ್ರವಾಗುತ್ತಿದೆ. 19 ಸಾವಿರಕ್ಕೂ ಹೆಚ್ಚಿನ ವೋಟ್ ಗಳನ್ನೂ ಪಡೆದರು ಸಹ ಆಪ್ ರೇಟಿಂಗ್ 99%ಕ್ಕೆ ನಿಂತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಪ್ರಖ್ಯಾತ ಸಿನಿಮಾ ಜಾಲತಾಣ ‘ಐಎಂಡಿಬಿ’ ಯಲ್ಲೂ ಸಹ ಸುಮಾರು 9.7 ಅಂಕ ಪಡೆದುಕೊಂಡು ಮುಂಚೂಣಿಯಲ್ಲಿದೆ ‘ಕಾಂತಾರ’.

ಇದೇ ಸೆಪ್ಟೆಂಬರ್ 30ರಂದು ತೆರೆಕಂಡಿದ್ದ ಈ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದ್ದು, ರಿಷಬ್ ಶೆಟ್ಟಿ ನಟನೆ ನಿರ್ದೇಶನದ ಈ ಸಿನಿಮಾಗೆ ಹೊಂಬಾಳೆ ಫಿಲಂಸ್’ ಬಂಡವಾಳ ಹೂಡಿದ್ದಾರೆ. ಕನ್ನಡ ಮಾತ್ರದಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಭಾಷೆಯ ಹಂಗಿಲ್ಲದೆ ಎಲ್ಲಾ ಸಿನಿರಸಿಕರು ಪ್ರಶಂಸಿಸುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ