ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸಿ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ಕಿರಣ್ ರಾಜ್ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಮೂಡಿಸುತ್ತಿದ್ದಾರೆ. ಕಿರುತೆರೆಯ ಜೊತೆಗೆ ಹಿರಿತೆರೆಯನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಕಿರಣ್ ರಾಜ್ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಪ್ರಸಿದ್ಧ್ ನಿರ್ದೇಶನದಡಿಯಲ್ಲಿ ಮೂಡಿಬರಲಿರುವ “ಶೇರ್” ಸಿನಿಮಾದಲ್ಲಿ ನಾಯಕ ಆಗಿ ಕಿರಣ್ ರಾಜ್ ಅಭಿನಯಿಸಲಿದ್ದು ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನಡೆಯಿತು. ಸಿನಿಮಾದ ಬಗ್ಗೆ ಮಾತನಾಡಿರುವ ಕಿರಣ್ ರಾಜ್ ಅವರು ಶೇರ್ ಸಿನಿಮಾವು ಸಂಪೂರ್ಣ ಆಕ್ಷನ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ” ಎಂದು ಹೇಳುತ್ತಾರೆ.

“ಸಾಹಸಮಯ ದೃಶ್ಯವನ್ನೊಳಗೊಂಡಿರುವ ಈ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ನಿಜವಾಗಿಯೂ ಖುಷಿ ತಂದಿದೆ. ಈ ಸಿನಿಮಾದ ಪಾತ್ರಕ್ಕಾಗಿ ಕಿಕ್ ಬಾಕ್ಸಿಂಗ್ ಹಾಗೂ ಮಾರ್ಷಲ್ ಆರ್ಟ್ಸ್ ಅನ್ನು ಕೂಡಾ ಕಲಿತಿದ್ದೇನೆ. ಭರ್ಜರಿ ಗಂಡು ಸಿನಿಮಾದಲ್ಲಿಯೂ ಅಷ್ಟೇ. ಸಾಹಸ ದೃಶ್ಯಗಳು ಬಹಳ ಸೊಗಸಾಗಿ ಬಂದಿದೆ” ಎನ್ನುತ್ತಾರೆ ಕಿರಣ್ ರಾಜ್.

ದೇವತೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಕಿರಣ್ ರಾಜ್ ಮುಂದೆ ಕಿನ್ನರಿ ಧಾರಾವಾಹಿಯ ನಕುಲ್ ಆಗಿ ಜನಪ್ರಿಯತೆ ಗಿಟ್ಟಿಸಿಕೊಂಡರು. ಅಸತೋಮಾ ಸದ್ಗಮಯ ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಕಿರಣ್ ರಾಜ್ ಮಾರ್ಚ್ 22, ಬಹದ್ದೂರ್ ಗಂಡು, ಬಡ್ಡೀಸ್, ಚತುಷ್ಪಥ, ವಿಕ್ರಮ್ ಗೌಡ, ಬಡ್ಡೀಸ್ ಹಾಗೂ ಭರ್ಜರಿ ಗಂಡು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಶೇರ್ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಿರಣ್ ರಾಜ್ ಅಭಿನಯಿಸುತ್ತಿದ್ದು ತಮ್ಮ ನೆಚ್ಚಿನ ನಟ ಚಂದನವನದಲ್ಲಿ ಬ್ಯುಸಿಯಾಗಿರುವುದು ಖುಷಿ ತಂದಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ