ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ‘ಕನ್ನಡತಿ’ ಜನಪ್ರಿಯತೆಯನ್ನು ಹೊಂದಿರುವ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಜೊತೆಗೆ ರಂಜನಿ ರಾಘವನ್ ಅವರ ಸ್ಪಷ್ಟ ಕನ್ನಡವನ್ನು ಹೆಚ್ಚಿನವರೂ ಇಷ್ಟಪಡುತ್ತಾರೆ. ಇನ್ನು ಕೆಲವರು ಧಾರಾವಾಹಿ ನೋಡದಿದ್ದರೂ ಕೊನೆಯಲ್ಲಿ ಹೇಳುವ ಕನ್ನಡ ಪಾಠವನ್ನಂತೂ ತಪ್ಪದೇ ವೀಕ್ಷಿಸುತ್ತಾರೆ. ಒಂದು ರೀತಿಯಲ್ಲಿ ಕನ್ನಡ ಅಂದರೆ ಭುವಿ, ಭುವಿ ಅಂದರೆ ಕನ್ನಡ ಅನ್ನುವಂತಾಗಿದೆ.

ಅಂದಹಾಗೆ ಕನ್ನಡದ ಅಭಿಮಾನವನ್ನು ಭುವಿ ಧಾರಾವಾಹಿಗೆ ಮಾತ್ರ ಮೀಸಲಿಟ್ಟಿಲ್ಲ. ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಅವರು ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಹಾಕಿರುವಂತಹ ಪೋಸ್ಟ್ ಸಾಕ್ಷಿ. ಹೌದು, ರಂಜನಿ ರಾಘವನ್ ಅವರು ಅ ಯಿಂದ ಅಃ ತನಕ ಬರೆದು ಆ ಪೋಸ್ಟನ್ನು ಶೇರ್ ಮಾಡಿದ್ದಾರೆ.

ಕನ್ನಡ ಅಕ್ಷರಗಳನ್ನು ಬರೆದು ತುಂಬಾ ದಿನ ಆಗಿತ್ತು ಎಂದಿರುವ ಭುವಿ ಅ ಯಿಂದ ಅಃ ತನಕ ಬರೆಯುವುದರೊಂದಿಗೆ ‘ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇದೆ. ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ನೆನೆದು ಅವರಿಗೆ ಗೌರವ ಸಲ್ಲಿಸೋಣ ಎಂದು’ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಭುವಿ, ‘ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡೋಣ ಬನ್ನಿ. ರೀಲ್ ಮಾಡಿ ಟ್ಯಾಗ್ ಮಾಡಿ. ನಾನು ಸ್ಟೋರಿಯಲ್ಲಿ ಶೇರ್ ಮಾಡುತ್ತೇನೆ’ ಎಂದಿದ್ದಾರೆ.

‘ಆಚಾರ್ಯ ದೇವೋಭವ’ ಎಂಬ ನುಡಿಯಂತೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ರಾಮಾಯಣ, ಮಹಾಭಾರತ ಕಾಲದಿಂದಲೂ ಗುರು-ಶಿಷ್ಯರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಮಕ್ಕಳನ್ನು ಆಯಾ ದೇಶದ ಭವಿಷ್ಯ ಎನ್ನುವಂತೆ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ದೇಶದ ನಿಜವಾದ ಶಿಲ್ಪಿಗಳು ಎನ್ನಬಹುದು. ಭಾರತದಲ್ಲಿ 1962 ರಿಂದ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ