ರಿಷಬ್ ಶೆಟ್ಟಿಯವರು ಸದ್ಯ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರ ನಿರ್ದೇಶನದಲ್ಲಿ ಅವರೇ ನಟಿಸಿರುವ ‘ಕಾಂತಾರ’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಪಡೆಯುತ್ತಾ, ಸಿನಿರಸಿಕರ ಹುಬ್ಬೇರಿಸುವಷ್ಟು ರೋಮಾಂಚನ ನೀಡುತ್ತಿದೆ. ಕನ್ನಡ ಮಾತ್ರವಲ್ಲದೇ ಬೇರೆ ಸಿನಿರಂಗದ ಕಲಾವಿದರೂ ಸಹ ‘ಕಾಂತಾರ’ವನ್ನು ಹೊಗಳುತ್ತಿದ್ದಾರೆ. ಸದ್ಯ ವಿವಿಧ ಭಾಗಗಳಿಂದ ಪ್ರಶಂಸೆ ಪಡೆಯುತ್ತಿರುವ ರಿಷಬ್ ಶೆಟ್ಟಿಯವರಿಗೆ ಮತ್ತೊಂದು ಸುದ್ದಿ ಸಂತಸಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಇದು ‘ಕಾಂತಾರ’ಕ್ಕೆ ಸಂಬಂಧಿಸಿದ್ದಲ್ಲ.

ರಿಷಬ್ ಅವರು ನಟನೆ, ನಿರ್ದೇಶನದ ಜೊತೆಗೆ ತಮ್ಮ ‘ರಿಷಬ್ ಶೆಟ್ಟಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡುತ್ತಾರೆ. ಈಗಾಗಲೇ ಹಲವು ಹೊಸಪರಿಯ ಸಿನಿಮಾಗಳ ರೂವಾರಿಯಾಗಿರುವ ಈ ನಿರ್ಮಾಣ ಸಂಸ್ಥೆ ಇತ್ತೀಚೆಗೆ ‘ಶಿವಮ್ಮ’ ಎಂಬ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಈಗ ಈ ಚಿತ್ರ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದನ್ನು ತನ್ನದಾಗಿಸಿಕೊಂಡಿದೆ. ಈ ಸಾಲಿನ ‘ಬೂಸಾನ್ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶಿತಗೊಂಡಿದ್ದ ಈ ಚಿತ್ರ ತೀರ್ಮಾನಕರ ಮನಗೆದ್ದಿದೆ. ಹಾಗಾಗಿ ಚಿತ್ರ ಅಲ್ಲಿನ ಪ್ರಮುಖ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಚಿತ್ರತಂಡ ಶುಕ್ರವಾರ ಘೋಷಣೆ ಮಾಡಿದೆ.

ಪಿರಮಿಡ್ ಯೋಜನೆಯೊಂದರಲ್ಲಿ ತೊಡಗಿಕೊಳ್ಳುವ ಒಬ್ಬ ಬಡಮಹಿಳೆಯ ಕಥೆ ಹೇಳುವ ‘ಶಿವಮ್ಮ’ ಸಿನಿಮಾ ಜೈ ಶಂಕರ್ ಎಂಬ ಯುವನಿರ್ದೇಶಕರ ಮೊದಲ ಸಿನಿಮಾವಾಗಿದೆ. ಬೂಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉನ್ನತ ಪ್ರೊಫೈಲ್ ನ ನ್ಯೂ ಕರೆಂಟ್ಸ್ ಪ್ರಶಸ್ತಿಗಾಗಿ ಇತರೆ ಒಂಬತ್ತು ಚಿತ್ರಗಳ ಜೊತಗೆ ‘ಶಿವಮ್ಮ’ ಕೂಡ ಪ್ರದರ್ಶಿಸಿತ್ತು.

ಸಿನಿಮಾ ಕಂಡ ತೀರ್ಪುಗಾರರು ನಿರ್ದೇಶಕರ ಸ್ವಂತಿಕೆ ಹಾಗೂ ವರ್ತಮಾನಕ್ಕೆ ಸರಿಹೊಂದುವ ಕಥೆಯನ್ನು ಶ್ಲಾಘಿಸಿದ್ದು, 30000 ಡಾಲರ್ ಗಳ ನಗದು ಬಹುಮಾನಕ್ಕೆ ಆರಿಸಲಾಗುವ ಎರಡು ಸಿನಿಮಾಗಳಲ್ಲಿ ‘ಶಿವಮ್ಮ’ ಸಿನಿಮಾವನ್ನು ಸೇರಿಸಿದ್ದಾರೆ. ದಕ್ಷಿಣ ಕೊರಿಯಾ ಮೂಲದ ‘ಎ ವೈಲ್ಡ್ ರೂಮರ್’ ಇದರ ಜೊತೆಗೆ ವಿಜೇತರಾದ ಇನ್ನೊಂದು ಸಿನಿಮಾವಾಗಿದೆ. ಈ ವಿಚಾರ ‘ಕಾಂತಾರ’ ಸಿನಿಮಾದ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ಹಾಗು ತಂಡದವರಿಗೆ ಇನ್ನಷ್ಟು ಸಂತಸ ತಂದಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ