ದಕ್ಷಿಣ ಸಿನಿಮಾರಂಗದ ಪ್ರತಿಷ್ಟಿತ ಪ್ರಶಸ್ತಿಯಾದ ‘ಫಿಲಂಫೇರ್’ ಪುರಸ್ಕಾರದ ಈ ವರ್ಷದ ಆವೃತ್ತಿ ಇತ್ತೀಚಿಗಷ್ಟೇ ನಡೆದಿದೆ. ಈ ಸಮಾರಂಭದಲ್ಲಿ ಹಲವು ಕನ್ನಡದ ಸಿನಿಕರ್ಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಶಕಗಳಿಂದ ನಡೆಯುತ್ತಿರುವ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಇಲ್ಲಿಯವರೆಗೆ ಹಲವಾರು ಕನ್ನಡಿಗರು ತಮ್ಮ ಮುಡಿಗೆರಿಸಿಕೊಂಡಿದ್ದಾರೆ. ಇದರಲ್ಲಿ ಅತೀ ಹೆಚ್ಚು ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದು ದಾಖಲೆ ಬರೆದ ಕನ್ನಡಿಗರು ಇದ್ದಾರೆ.

ದಕ್ಷಿಣ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಎ ಆರ್ ರೆಹಮಾನ್ ಅವರು ಬರೋಬ್ಬರಿ 17 ಬಾರಿ ‘ಫಿಲಂಫೇರ್’ ಪ್ರಶಸ್ತಿ ಪಡೆಯುವುದರ ಮೂಲಕ ಅತೀ ಹೆಚ್ಚು ಬಾರಿ ಫಿಲಂಫೇರ್ ಪಡೆದ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ದ್ವಿತೀಯ ಸ್ಥಾನಿಯಾಗಿ 16 ಬಾರಿ ಪ್ರಶಸ್ತಿ ಪಡೆದ ಕಮಲ್ ಹಾಸನ್ ಅವರಿದ್ದರೆ, 12 ಬಾರಿ ಫಿಲಂಫೇರ್ ಗಳಿಸಿದ ಮಲಯಾಳಂನ ಖ್ಯಾತ ನಟ ಮಮ್ಮೂಟಿ ಅವರು ಈ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ಕನ್ನಡದ ಕಲಾವಿದರ ಕಡೆಗೆ ಬಂದರೆ ಕನ್ನಡದ ವರನಟ ಡಾ. ರಾಜಕುಮಾರ್ ಅವರು ಎಂಟು ಬಾರಿ ‘ಫಿಲಂಫೇರ್’ ಪ್ರಶಸ್ತಿಗೆ ಭಾಜಾನರಾಗಿದ್ದಾರೆ. ಅಣ್ಣಾವ್ರು ನಟಿಸಿರುವ ಗಂಧದ ಗುಡಿ, ಮಯೂರ, ಶಂಕರ್ ಗುರು, ಕೆರಳಿದ ಸಿಂಹ, ಶ್ರಾವಣ ಬಂತು, ಅದೇ ಕಣ್ಣು, ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆಕಸ್ಮಿಕ ಚಿತ್ರಗಳಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನ ತಮ್ಮ ಮಡಿಲಿಗೆ ಸೇರಿಸಿಕೊಂಡಿದ್ದಾರೆ. ಜೊತೆಗೆ ಕನ್ನಡದ ಕಲಾವಿದರಲ್ಲಿ ದ್ವಿತೀಯ ಸ್ಥಾನವನ್ನ ಧೀಮಂತ ಕಲಾವಿದರಾದ ಅನಂತ್ ನಾಗ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ಹಂಚಿಕೊಂಡಿದ್ದಾರೆ.

ಅನಂತ್ ನಾಗ್ ಅವರು ಆರು ಬಾರಿ ‘ಅತ್ಯುತ್ತಮ ನಾಯಕ ನಟ’ ವಿಭಾಗದಲ್ಲಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದಾರೆ. ಇನ್ನೂ ಅಪ್ಪು ‘ಬೆಟ್ಟದ ಹೂ’, ‘ಅರಸು’,’ಹುಡುಗರು’,’ರಣವಿಕ್ರಮ’, ಹಾಗು ‘ರಾಜಕುಮಾರ’ ಸಿನಿಮಾಗಳಿಗೆ ಅತ್ಯುತ್ತಮ ನಟ ಎಂದು ಪ್ರಶಸ್ತಿ ಪಡೆದರೆ, 2022ನೇ ಸಾಲಿನ ಫಿಲಂಫೇರ್ ಸಮಾರಂಭದಲ್ಲಿ ‘ಜೀವಮಾನ ಶ್ರೇಷ್ಠ ಸಾಧನೆ’ ಎಂಬ ಪ್ರಶಸ್ತಿಯನ್ನು ಗೌರವ ಪೂರ್ವಕವಾಗಿ ಅಪ್ಪು ಅವರಿಗೆ ಒಪ್ಪಿಸಲಾಯಿತು.

ಜೊತೆಗೆ ಶಿವರಾಜಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರು ತಲಾ ನಾಲ್ಕು ಬಾರಿ ಫಿಲಂಫೇರ್ ಪಡೆದಿದ್ದು, ಕಿಚ್ಚ ಸುದೀಪ್ ಅವರು ಮೂರು ಬಾರಿ ಹಾಗೆಯೇ ಲೋಕೇಶ್ ಅವರು, ಗೋಲ್ಡನ್ ಸ್ಟಾರ್ ಗಣೇಶ, ನೆನಪಿರಲಿ ಪ್ರೇಮ್, ರಮೇಶ್ ಅವರಿಂದ ಹಾಗೂ ಯಶ್ ಅವರು ಎರಡು ಬಾರಿ ಈ ಫಿಲಂಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ