ಜೀ ಕನ್ನಡ ವಾಹಿನಿಯ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ ಕಮಲಿಯಲ್ಲಿ ನಾಯಕಿ ಕಮಲಿ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಅಮೂಲ್ಯ ಗೌಡ ಇದೀಗ ರಿಯಾಲಿಟಿ ಶೋ ವಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ 8ನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿರುವ ಅಮೂಲ್ಯ ಗೌಡ ಮೊದಲ ಬಾರಿ ರಿಯಾಲಿಟಿ ಶೋ ಅಂಗಳಕ್ಕೆ ಕಾಲಿಟ್ಟಿದ್ದಾರೆ. ನಟನೆಯ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಅಮೂಲ್ಯ ಬಿಗ್ ಬಾಸ್ ಮೂಲಕ ಮತ್ತೊಮ್ಮೆ ವೀಕ್ಷಕರಿಗೆ ಹತ್ತಿರವಾಗಲಿದ್ದಾರೆ.

ಇನ್ನು ಕಳೆದ ನಾಲ್ಕು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ ಕಮಲಿ ಧಾರಾವಾಹಿಯು ಶೀಘ್ರದಲ್ಲಿ ತನ್ನ ಪ್ರಸಾರ ನಿಲ್ಲಿಸಲಿದೆ. ಕಮಲಿ ಧಾರಾವಾಹಿಯಲ್ಲಿ ನಾಯಕಿ ಕಮಲಿ ಆಗಿ ನಟಿಸಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅಮೂಲ್ಯ ಗೌಡ “ಇದೊಂದು ನೆನಪಿಡುವಂತಹ ಪಯಣ” ಎಂದು ಹೇಳಿದ್ದರು.

“ನಾನು ಈ ಹಿಂದೆ ಒಂದೆರಡು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ಆದರೆ ನನಗೆ ಜನಪ್ರಿಯತೆ ದೊರಕಿದ್ದು ಮಾತ್ರ ಕಮಲಿ ಧಾರಾವಾಹಿಯಿಂದ. ಇಂದು ನಾನು ಎಲ್ಲೇ ಹೋದರೂ ಜನ ನನ್ನನ್ನು ಕಮಲಿಯಾಗಿಯೇ ಗುರುತಿಸುತ್ತಾರೆ. ಕಮಲಿ ಧಾರಾವಾಹಿಯಲ್ಲಿ ನಟಿಸಿದ್ದ ಎಲ್ಲಾ ಸಹಕಲಾವಿದರುಗಳು ಇದೀಗ ಕುಟುಂಬದಂತೆ ಆಗಿದ್ದಾರೆ” ಎಂದು ಕಮಲಿ ಪಯಣದ ಬಗ್ಗೆ ಹಂಚಿಕೊಂಡಿದ್ದರು ಅಮೂಲ್ಯ ಗೌಡ.

“ಕಳೆದ ನಾಲ್ಕು ವರ್ಷಗಳಿಂದ ಕಮಲಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಇದೀಗ ನನಗೆ ಕಿರುತೆರೆಯಿಂದ ಹಿರಿತೆರೆಗೆ ಹಾರುವ ಮನಸ್ಸಾಗಿದೆ. ಹೌದು, ನಾನು ಸಿನಿಮಾ ಕ್ಷೇತ್ರದತ್ತ ಕಾಲಿಡಲು ಬಯಸಿದ್ದೇನೆ. ಉತ್ತಮ ಕಥೆ, ಪ್ರಾಜೆಕ್ಟ್ ದೊರೆತರೆ ಖಂಡಿತಾ ಸಿನಿಮಾ ಮಾಡುತ್ತೇನೆ. ಜೊತೆಗೆ ಒಂದು ಒಳ್ಳೆಯ ಪಾತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದೇನೆ” ಎಂದು ಹೇಳಿದ್ದರು ಅಮೂಲ್ಯ ಗೌಡ.

ಸಾಂಸ್ಕೃತಿಕ ನಗರಿ ಮೈಸೂರಿನ ಕುವರಿ ಅಮೂಲ್ಯ ಬಣ್ಣದ ಪಯಣ ಶುರುವಾಗಿದ್ದು ಸ್ವಾತಿಮುತ್ತು ಧಾರಾವಾಹಿಯಿಂದ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸ್ವಾತಿಮುತ್ತು ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅಮೂಲ್ಯ ಗೌಡ ಮುಂದೆ ಜೀ ಕನ್ನಡ ವಾಹಿನಿಯ ಪುನರ್ ವಿವಾಹದಲ್ಲಿ ಸ್ವಾತಿ ಆಗಿ ಮೋಡಿ ಮಾಡಿದರು.

ಎರಡು ಧಾರಾವಾಹಿಗಳಲ್ಲಿ ಪೋಷಕ ಪಾತ್ರದ ಮೂಲಕ ಮನೆ ಮಾತಾದ ಈಕೆ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚಿದರು. ಮುಂದೆ ಕಮಲಿಯಾಗಿ ಬದಲಾದ ಅಮೂಲ್ಯ ಗೌಡ ಕಡಿಮೆ ಅವಧಿಯಲ್ಲಿಯೇ ಕರುನಾಡ ವೀಕ್ಷಕರ ಮನೆ ಮಗಳಾಗಿಬಿಟ್ಟರು.

ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಅಮೂಲ್ಯ ಗೌಡ “ಕಲಾವಿದ ಎಂದ ಮೇಲೆ ಯಾವುದೇ ಪಾತ್ರ ನೀಡಿದರೂ ನಟಿಸಲು ಸಿದ್ಧರಿರಬೇಕು. ಪಾತ್ರ ಯಾವುದೇ ಆಗಿರಲಿ, ಅದು ಜನರ ಮನಸ್ಸು ತಲುಪಿದಾಗ ಕಲಾವಿದರು ಗೆದ್ದಂತೆ” ಎಂದು ಈ ಹಿಂದೆ ಹೇಳಿದ್ದರು ಅಮೂಲ್ಯ ಗೌಡ. ಇಂತಿಪ್ಪ ಚೆಲುವೆ ಇದೀಗ ದೊಡ್ಮನೆಗೆ ಕಾಲಿಟ್ಟಿದ್ದು ಅಲ್ಲಿಯೂ ಕೂಡಾ ಗೆಲುವು ಸಾಧಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ