ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಾಯಕಿ ತಾರಿಣಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಅಮಿತಾ ಕುಲಾಲ್. ಮಲೆನಾಡ ಕುವರಿ ತಾರಿಣಿಯಾಗಿ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಕರಾವಳಿ ಬೆಡಗಿ ಅಮಿತಾ ಕುಲಾಲ್ ಈಗ “ಮನೆ ಮೆಚ್ಚಿದ ಮಗಳು” ಹೌದು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿವರ್ಷ ನಡೆಯುವ ಅನುಬಂಧ ಅವಾರ್ಡ್ಸ್ ಈ ವರ್ಷವೂ ಕೂಡಾ ನಡೆದಿದ್ದು ಪ್ರಸಕ್ತ ವರ್ಷದ ಮನೆ ಮೆಚ್ಚಿದ ಮಗಳು ಪ್ರಶಸ್ತಿ ಕರಾವಳಿ ಕುವರಿಯ ಮುಡಿಗೇರಿದೆ.

ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಕಾಲಿಟ್ಟಿರುವ ಅಮಿತಾ ಕುಲಾಲ್ ಕಡಿಮೆ ಅವಧಿಯಲ್ಲಿಯೇ ಕಿರುತೆರೆ ವೀಕ್ಷಕರ ಮನೆ ಮನ ಸೆಳೆದಿದ್ದಾರೆ ಎಂಬುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ. “ಮನೆ ಮೆಚ್ಚಿದ ಮಗಳು ಪ್ರಶಸ್ತಿ ದೊರಕಿದೆ. ನಾನು ಖಂಡಿತಾ ಇದರ ಬಗ್ಗೆ ಯೋಚನೆಯೂ ಮಾಡಿರಲಿಲ್ಲ. ಯಾಕೆಂದರೆ ನಮ್ಮ ಧಾರಾವಾಹಿ ಆರಂಭವಾಗಿ ಸ್ವಲ್ಪ ಸಮಯ ಆಗಿದೆಯಷ್ಟೇ. ನನ್ನ ಹೆಸರು ಕೂಗಿ ಕರೆದಾಗ ನಾನು 5 ಸೆಕೆಂಡ್ ಗಳ ಕಾಲ ಬ್ಲಾಂಕ್ ಆಗಿದ್ದೆ. ತುಂಬಾ ಖುಷಿಯಾಯಿತು. ಜನ ನನ್ನನ್ನು, ನಟನೆಯನ್ನು ಸ್ವೀಕರಿಸಿದ್ದಾರೆ ಎಂದು ಸಂತಸವಾಯಿತು” ಎನ್ನುತ್ತಾರೆ ಅಮಿತಾ ಕುಲಾಲ್.

“ಈ ಪ್ರಶಸ್ತಿಯನ್ನು ನಾನು ಶ್ರುತಿ ನಾಯ್ಡು ಹಾಗೂ ರಮೇಶ್ ಇಂದಿರಾ ಅವರಿಗೆ ಡೆಡಿಕೇಟ್ ಮಾಡುತ್ತೇನೆ. ಇದರ ಜೊತೆಗೆ ಸದಾ ಕಾಲ ನನಗೆ ಪ್ರೋತ್ಸಾಹ ನೀಡಿ, ಬೆಂಬಲಿಸುತ್ತಿರುವ ಅಪ್ಪ, ಅಮ್ಮ ಹಾಗೂ ತಂಗಿಗೆ ಇದು ಅರ್ಪಣೆ. ನನ್ನ ತಾಯಿ ಈಗ ಇಲ್ಲ. ಧಾತಾವಾಹಿ ಶೂಟಿಂಗ್ ಶುರುವಾದ ಐದೇ ದಿನದಲ್ಲಿ ಅವರು ತೀರಿಕೊಂಡರು. ಅವರು ಈಗ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು” ಎಂದು ಭಾವುಕದಿಂದ ಹೇಳಿದರು ಅಮಿತಾ ಕುಲಾಲ್.

ಮೊದಲ ಧಾರಾವಾಹಿಯಲ್ಲಿಯೇ ಪ್ರಶಸ್ತಿ ಪಡೆದಿರುವ ಅಮಿತಾ ಕುಲಾಲ್ ಕನ್ನಡ ಕಿರುತೆರೆಗೆ ಹೊಸಬರು. ಆದರೆ ಅವರ ಕಿರುತೆರೆ ಪಯಣ ಶುರುವಾಗಿದ್ದು ತೆಲುಗು ಧಾರಾವಾಹಿಯಿಂದ. ಜೀ ತೆಲುಗು ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ರೌಡಿ ಗಾರಿ ಪೆಳ್ಳಂ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಅಮಿತಾ ಕುಲಾಲ್ ಸದ್ಯ ಒಲವಿನ ನಿಲ್ದಾಣದ ತಾರಿಣಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಟನೆಯ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆ ಪಯಣ ಶುರು ಮಾಡಿರುವ ಕರಾವಳಿ ಕುವರಿ ನಂತರ ಗಿಫ್ಟ್ ಬಾಕ್ಸ್ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸಿದರು.

ಹಿರಿತೆರೆಯ ನಂತರ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಅಮಿತಾ ಕುಲಾಲ್ ಅವರ ಬಣ್ಣದ ಪಯಣ ಶುರುವಾಗಿದ್ದು ಮಾಡೆಲಿಂಗ್ ನಿಂದ. ಪದವಿಯ ನಂತರ ಮಾಡೆಲಿಂಗ್ ಲೋಕದಲ್ಲಿ ಮಿಂಚುವ ಧೃಡ ನಿರ್ಧಾರ ಮಾಡಿದ ಅಮಿತಾ ಮುಂದೆ ಮುಂಬೈಗೆ ಹೋಗಿ ಮಾಡೆಲಿಂಗ್ ನ ರೀತಿ ನೀತಿ ತಿಳಿದುಕೊಂಡರು.

ಫ್ಯಾಷನ್ ಶೋಗಳಲ್ಲಿ ಮಿಂಚಿದ ಈಕೆ ರೂಪದರ್ಶಿಯಾಗಿ ಕಾಣಿಸಿಕೊಂಡ ಚೆಲುವೆ. ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಬಾದ್ ಸಾರೀಸ್ ಗಳಿಗೆ ರೂಪದರ್ಶಿಯಾಗಿ ಸೈ ಎನಿಸಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ