ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಜೆ ಆಲಿಯಾಸ್ ಅಭಿರಾಮ್ ಜಯಶಂಕರ್ ಆಗಿ ಅಭಿನಯಿಸಿ ಸೀರಿಯಲ್ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಮನ ಕದ್ದ ದಿಲೀಪ್ ರಾಜ್ ಅವರು ಕಿರುತೆರೆಯ ನಂತರ ಇದೀಗ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಅಭಯ್ ಚಂದ್ರ ನಿರ್ದೇಶನದ “ಮಹಾನ್ ಕಲಾವಿದ” ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ ದಿಲೀಪ್ ರಾಜ್. ಕಲಾವಿದನ ಬದುಕಿನ ಬವಣೆಗಳನ್ನು ತೋರಿಸುವ ಈ ಸಿನಿಮಾದಲ್ಲಿ ಪಾತ್ರವನ್ನು ಬರೆಯುವಾಗ ದಿಲೀಪ್ ರಾಜ್ ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ನಿರ್ದೇಶಕರು ನಿರ್ಧರಿಸಿದ್ದರು. ಮಾತ್ರವಲ್ಲ ಇದೀಗ ದಿಲೀಪ್ ರಾಜ್ ಅವರೇ ಸಿನಿಮಾದ ನಾಯಕ ಆಗಿ ಆಯ್ಕೆಯಾಗಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ದಿಲೀಪ್ ರಾಜ್ ” ತುಂಬಾ ದಿನಗಳ ನಂತರ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದೇನೆ. ಅಭಯ್ ಚಂದ್ರ ಅವರು ಕೂಡಾ ಉತ್ತಮ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಎರಡು ಹಂತಗಳ ಚಿತ್ರೀಕರಣವೂ ಕೂಡಾ ಈಗಾಗಲೇ ಮುಗಿದಿದೆ” ಎಂದಿದ್ದಾರೆ ದಿಲೀಪ್ ರಾಜ್

“ಯಾವುದೇ ಪಾತ್ರ ಆಗಿರಲಿ, ಒಬ್ಬ ಕಲಾವಿದ ಮಾಡುವ ನಟನೆಯನ್ನು ಮೊದಲು ಮೆಚ್ಚಬೇಕಾದುದು ನಿರ್ದೇಶಕ. ಅಂದ ಹಾಗೇ ನನ್ನ ನಟನೆ ಹೇಗಿದೆ ಎಂದು ಅಭಯ್ ಅವರೇ ಹೇಳಬೇಕು. ಇನ್ನು ನಾನು ಕೂಡಾ ಈ ಸಿನಿಮಾ ಹೇಗೆ ಬರುತ್ತದೆ ಎಂದು ನೋಡಲು ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ ದಿಲೀಪ್ ರಾಜ್.

ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಮಳೆಬಿಲ್ಲು, ಪ್ರೀತಿಗಾಗಿ, ರಥಸಪ್ತಮಿ ಹೀಗೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ದಿಲೀಪ್ ರಾಜ್ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಬಾಯ್ ಪ್ರೆಂಡ್, ನನ್ನ ಲವ್ ಮಾಡ್ತೀಯಾ, 7’o ಕ್ಲಾಕ್, ಮಿಲನ, ನಿನಗಾಗಿ ಕಾದಿರುವೆ, ಲವ್ ಗುರು, ಕಿಲಾಡಿ ಕೃಷ್ಣ, ಗಾನಾಬಜಾನಾ, ಸುಗ್ರೀವ, ಪೊಲೀಸ್ ಕ್ವಾಟರ್ಸ್, ಪಂಚಾಮೃತ, ಬರ್ಫಿ, ಮಹಾನದಿ, ಟೋನಿ, ಲಕ್ಷ್ಮಿ, ಭೈರವಿ,ಮಿಂಚಾಗಿ ನೀನು ಬರಲು, ಯೂ ಟರ್ನ್, ಅಂಬಿ ನಿಂಗ್ ವಯಸ್ಸಾಯ್ತೋ, ಕಿಸ್ಮತ್ ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಸದ್ಯ ಹಿಟ್ಲರ್ ಕಲ್ಯಾಣದ ಎಜೆಯಾಗಿ ವೀಕ್ಷಕರನ್ನು ರಂಜಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಮಹಾನ್ ಕಲಾವಿದ ಸಿನಿಮಾದಲ್ಲಿಯೂ ನಟಿಸುತ್ತಿದ್ದು ಕಿರುತೆರೆ ಜೊತೆಗೆ ಹಿರಿತೆರೆಯನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ