ಸೋಂಪು… ಸೋಂಪುವಿನ ಬಗ್ಗೆ ಎಂದಾದರೂ ಕೇಳಿದ್ದೀರಾ ಎಂದು ಅಪ್ಪಿತಪ್ಪಿಯೂ ಯಾರ ಬಳಿಯಲ್ಲೂ ಕೇಳಬೇಡಿ. ಯಾಕೆಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಟ್ಟು ಸವಿಯುವ ಆಹಾರ ಪದಾರ್ಥ ಈ ಸೋಂಪು. ಹೌದು ಕಣ್ರೀ, ಹೋಟೆಲಿಗೆ ಹೋಗಿ ಚೆನ್ನಾಗಿ ತಿಂದು ಬಿಲ್ ಕೊಟ್ಟು ಬರುವಾಗ ಟೇಬಲ್ ಮೇಲೆ ಇರುವ ಸೋಂಪನ್ನು ಬಾಯಿಗೆ ಹಾಕಿ ಜಗಿದು ತಿಂದರೇನೇ ಹೋಟೆಲ್ ನಲ್ಲಿ ತಿಂದುದು ಪೂರ್ತಿ ಆದಂತೆ. ಒಮ್ಮೆ ತಿಂದರೆ ಸಾಕು, ಮತ್ತೊಮ್ಮೆ ಮಗದೊಮ್ಮೆ ಸವಿಯಬೇಕು ಎಂದೆನಿಸುವ ಸೋಂಪು ಆರೋಗ್ಯಕ್ಕೆ ಒಳ್ಳೆಯದು ಹೌದು

ಸೋಂಪಿನ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ. ಬಹುಶಃ ಅದೇ ಕಾರಣದಿಂದ ಹೋಟೆಲ್ ನಲ್ಲಿ ಊಟ ಅಥವಾ ತಿಂಡಿ ಆದ ಬಳಿಕ ತಿನ್ನಲು ಸೋಂಪು ತಂದಿಡುತ್ತಾರೆ. ಜೀರ್ಣಕ್ರಿಯೆ ಆರಾಮವಾಗಿ ಆಗಲಿ ಎನ್ನುವ ಮುಖ್ಯ ಉದ್ದೇಶವೂ ಕೂಡಾ ಅದರಲ್ಲಿ ಅಡಕವಾಗಿರಲುಬಹುದು. ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಈ ಸೋಂಪಿಗಿದೆ.

ಸುವಾಸನೆಯುಕ್ತವಾಗಿರುವ ಈ ಸೋಂಪನ್ನು ಸೇವಿಸುವುದರಿಂದ ಬಾಯಿಯಲ್ಲಿನ ದುರ್ಗಂಧ ಕೂಡಾ ಮಾಯವಾಗುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅರ್ಧ ಟೀಸ್ಪೂನ್ ನಷ್ಟು ಸೋಂಪು ಅಗಿಯಿರಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆ ನಿಲ್ಲುತ್ತದೆ.

ಸೋಂಪಿನಲ್ಲಿರುವ ವಿಟಮಿನ್ ಎ ಯು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿ. ರಕ್ತದೊತ್ತಡವನ್ನು ಕೂಡಾ ಕಡಿಮೆ ಮಾಡುವ ಶಕ್ತಿಯಿರುವ ಸೋಂಪು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಮಾತ್ರವಲ್ಲ ರಕ್ತವನ್ನು ಕೂಡಾ ಇದು ಶುದ್ದೀಕರಿಸುತ್ತದೆ.

ಇನ್ನು ಮುಖ್ಯವಾದ ವಿಚಾರವೆಂದರೆ ತಿಂಗಳ ಮುಟ್ಟಿನ ಸಮಯದಲ್ಲಿ ಅನೇಕ ಹೆಣ್ಮಕ್ಕಳು ವಿಪರೀತ ಹೊಟ್ಟೆ ಬೇನೆಯಿಂದ ನರಳುತ್ತಾರೆ. ಅಂತವರಿಗೆ ಇದು ಹೇಳಿ ಮಾಡಿಸಿದ ಮದ್ದು. ಮೊದಲಿಗೆ ಒಂದು ಚೂರು ಸೋಂಪನ್ನು ನೀರಿನಲ್ಲಿ ಹಾಕಿ ಚಿನ್ನಾಗಿ ಕುದಿಸಬೇಕು. ನಂತರ ಹಾಗೇ ಕುದಿಸಿದ ನೀರು ಕುಡಿದರೆ ಸಾಕು, ಹೊಟ್ಟೆ ನೋವು ಕಡಿಮೆಯಾಗುತ್ತದೆ. ಮತ್ತು ಮುಟ್ಟಿನ ಸಮಯದಲ್ಲಿ ಅತಿಯಾಗಿ ಆಗುವ ರಕ್ತಸ್ರಾವ ನಿಯಂತ್ರಿಸುವ ಶಕ್ತಿಯನ್ನು ಪುಟ್ಟ ಸೋಂಪು ಒಳಗೊಂಡಿದೆ.

ಸವಿಯಲು ರುಚಿಯಾಗಿರುವ ಸೋಂಪು ವಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಾದ ಮೆಗ್ನೇಶಿಯಂ, ಕ್ಯಾಲ್ಸಿಯಂ ಮುಂತಾದವುಗಳು ಕೂಡಾ ದೊರೆಯುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ