ಔಷಧೀಯ ಗಿಡಮೂಲಿಕೆಗಳನ್ನು ಬೆಳೆಸುವಲ್ಲಿ,ಉಪಯೋಗಿಸುವಲ್ಲಿ ಭಾರತೀಯರು ಮೊದಲಿನಿಂದಲೂ ಅಗ್ರಗಣ್ಯರು. ಅರಳುವ ಹೂವಿನಲ್ಲೂ, ಬೆಳೆಯುವ ಗಿಡದಲ್ಲೂ ಅದರ ಗುಣವನ್ನು ಅರಿತು ಉಪಯೋಗಿಸುವ ತಂತ್ರ ನಮ್ಮವರಿಗೆ ತಿಳಿದಿದೆ. ನಮ್ಮ ಮನೆಯ ಅಂಗಳದಲ್ಲಿನ ಅನೇಕ ಗಿಡಮೂಲಿಕೆಗಳು ಅಥವಾ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆಯಾದರೂ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಈಗಿನವರೆಗೆ ಇದರ ಗುರುತು ಹೆಚ್ಚಿನ ಅರಿವಿರುವುದಿಲ್ಲ. ಅಂತಹ ಗಿಡಗಳ ಸಾಲಿನಲ್ಲಿ ಶಂಖಪುಷ್ಪ ಗಿಡ ಸೇರಿಕೊಳ್ಳುತ್ತದೆ.

ನೀಲಿ, ಬಿಳಿ ಬಣ್ಣದಲ್ಲಿ ಹೂ ಬಿಡುವ ಈ ಸಸ್ಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಂಸ್ಕೃತದಲ್ಲಿ ಇದನ್ನು ಗಿರಿಕರ್ಣಿಕಾ ಎಂದು ಕರೆಯುತ್ತಾರೆ. ಅಷ್ಟಕ್ಕೂ ಶಂಖಪುಷ್ಪದ ಉಪಯೋಗಗಳೇನು ಎಂದು ತಿಳಿಯೋಣ ಬನ್ನಿ. ಮೊದಲಿಗೆ ಸರಳವಾಗಿ ಶಂಖಪುಷ್ಪದ ಟೀಯನ್ನು ತಯಾರಿಸುವುದು ಹೇಗೆಂದು ನೋಡೋಣ.

ಶಂಖಪುಷ್ಪ ಟೀ ತಯಾರಿಸುವ ವಿಧಾನ
ಒಂದು ಕಪ್‌ಗೆ 3 ರಿಂದ 4 ಒಣಗಿದ ಶಂಖಪುಷ್ಪ ಹೂವುಗಳನ್ನು ಹಾಕಿ ಅದಕ್ಕೆ 150 ಮಿಲಿ ಬಿಸಿ ನೀರನ್ನು ಸೇರಿಸಬೇಕು. ಹೂವುಗಳನ್ನು 5 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಸೇವನೆ ಮಾಡಬಹುದು. ಅಥವಾ,1 ಟೀ ಸ್ಪೂನ್ ನಿಂಬೆ ರಸ ಅಥವಾ 1/2 ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿಯೂ ಸೇವನೆ ಮಾಡಬಹುದು.
ನೆನಪಿಡಿ ನಿಮ್ಮ ಆರೋಗ್ಯಕ್ಕೆ ಸರಿಹೊಂದುವುದಾರೆ ಮಾತ್ರ ಸೇವಿಸಿ. ಇಲ್ಲವಾದರೆ ವೈದ್ಯರ ಸಲಹೆ ಪಡೆದು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎನ್ನುವುದನ್ನು ತಿಳಿದುಕೊಂಡು ಉಪಯೋಗಿಸಿ.
ಶಂಖಪುಷ್ಪದ ಟೀ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ.
ಮಾನಸಿಕ ಆರೋಗ್ಯದ ಸಮತೋಲನ
ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲೂ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಹೆಚ್ಚಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕೆ ಈ ಶಂಖಪುಷ್ಟ ಸಹಾಯ ಮಾಡುತ್ತದೆ. ಜ್ಞಾಪಕ ಶಕ್ತಿ ವೃದ್ಧಿಯಾಗಬೇಕು ಎನ್ನುವವರು ನಿಯಮಿತವಾಗಿ ಶಂಖಪುಷ್ಟ ಹೂವಿನ ಟೀ ಸೇವನೆ ಮಾಡುತ್ತಾ ಬಂದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಶಂಖ ಪುಷ್ಪದಲ್ಲಿನ ಉತ್ಕರ್ಷಣಾ ನಿರೋಧಕ ಸಾಮರ್ಥ್ಯ ಮತ್ತು ಉರಿಯೂತದ ಸಾಮರ್ಥ್ಯವು ಕಲಿಕೆ, ಆಲೋಚನೆ, ನೆನಪಿನ ಶಕ್ತಿ, ನಿರ್ಧಾರ ತೆಗೆದುಕೊಳ್ಳುವುದು ಇತ್ಯಾದಿಯಾಗಿರುವ ಮೆದುಳಿನ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.

ಕೊಲೆಸ್ಟ್ರಾಲ್ ಮಟ್ಟದ ನಿಯಂತ್ರಣ
ಕೆಲವೊಮ್ಮೆ ನಾವು ಸೇವಿಸಿದ ಆಹಾರದಲ್ಲಿ ಏರುಪೇರಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಬಹುದು. ಶಂಖಪುಷ್ಪದ ಟೀ ತಯಾರಿಸಿ ಸೇವನೆ ಮಾಡುವುದರಿಂದ ಇದನ್ನು ಸರಿಪಡಿಸಿಕೊಳ್ಳಬಹುದು. ಜೊತೆಗೆ ದೇಹದಲ್ಲಿನ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲೂ ಇದು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ
ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಶಂಖಪುಷ್ಪ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
ಅಲ್ಲದೆ ಕಿಬ್ಬೊಟ್ಟೆ ನೋವು, ಕಿಬ್ಬೊಟ್ಟೆ ಹಿಗ್ಗುವಿಕೆ, ಅಲ್ಸರೇಟಿವ್ ಕೊಲೈಟಿಸ್ ಮತ್ತು ಕರುಳಿನ ಕೆರೆತದಂತಹ ಲಕ್ಷಣಗಳನ್ನು ನಿವಾರಿಸುತ್ತದೆ.

ತಲೆನೋವಿನ ನಿವಾರಣೆ
ಅತಿಯಾದ ಕೆಲಸ, ಒತ್ತಡ, ಆತಂಕ ಇತ್ಯಾದಿಗಳಿಂದ ತಲೆನೋವು ಉಂಟಾಗುವುದು ಸಾಮಾನ್ಯ.
ದೀರ್ಘಕಾಲದ ತಲೆನೋವು, ಉದ್ವೇಗದ ಸಮಸ್ಯೆಗಳಿಗೆ ಶಂಖಪುಷ್ಪ ಪರಿಹಾರ ನೀಡುತ್ತದೆ. ಇದು ಕಿರಿಕಿರಿಗೊಂಡ ನರಗಳನ್ನು ಶಮನಗೊಳಿಸಿ ಮೆದುಳನ್ನು ಶಾಂತಗೊಳಿಸುವುದರೊಂದಿಗೆ ನರಗಳ ಕಾರ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
ಇವಿಷ್ಟೇ ಅಲ್ಲದೆ ಶಂಖ ಪುಷ್ಪದಿಂದ ಇನ್ನೂ ಹಲವಾರು ಉಪಯೋಗಗಳಿವೆ.
ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣ
ಶಂಖಪುಷ್ಪ ಹೂವು ಗ್ಲೈಕೊಪ್ರೋಟೀನನ್ನು ಹೊರ ಹಾಕುತ್ತದೆ. ಹೀಗಾಗಿ ಹೊಟ್ಟೆಯಲ್ಲಿನ ವಿವಿಧ ರೀತಿಯ ಹುಣ್ಣುಗಳ ವಿರುದ್ಧ ಸ್ವಲ್ಪ ಪರಿಣಾಮವನ್ನು ತೋರಿಸುತ್ತದೆಯಂತೆ. ಆದರೆ ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು ಮತ್ತು ಹೇಗೆ ಸೇವಿಸಬೇಕು ಎನ್ನುವ ಬಗ್ಗೆ ನಿಮ್ಮ ದೇಹ ಪ್ರಕೃತಿಗೆ ತಕ್ಕಹಾಗೆ ವೈದ್ಯರ ಬಳಿ ಸಲಹೆ ಪಡೆದು ಸೇವಿಸುವುದು ಉತ್ತಮ.

ಚರ್ಮದ ಆರೋಗ್ಯಕ್ಕೆ ಒಳಿತು
ಶಂಖ ಪುಷ್ಪ ಹೂವನ್ನು ಒಣಗಿಸಿ ಪುಡಿ ಮಾಡಿ ಅದನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮವು ಕಾಂತಿಯುತವಾಗುತ್ತದೆ. ಇದು ಚರ್ಮಕ್ಕೆ ಟಾನಿಕ್ ನಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿನ ಉತ್ಕರ್ಷಣಾ ನಿರೋಧಕ ಗುಣವು ವಯಸ್ಸಾದ ವಿವಿಧ ಚಿಹ್ನೆಗಳಾದ ಸುಕ್ಕುಗಳು, ಸೂಕ್ಷ್ಮ ರೇಖೆಗಳು, ಕಪ್ಪು ಕಲೆಗಳು ಇತ್ಯಾದಿಗಳಿಗೆ ಪರಿಣಾಮಕಾರಿಯಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ