ಮ್ಯಾಂಗೋಸ್ಟೀನ್ ಹಣ್ಣನ್ನು ಹಣ್ಣುಗಳ ರಾಣಿ ಎಂದು ಕರೆಯುತ್ತಾರೆ. ರುಚಿಯಲ್ಲಿ ಸಿಹಿಯಾದ ಈ ಹಣ್ಣನ್ನು ನಮ್ಮ ದೇಶದಲ್ಲಿ, ವಿದೇಶದಲ್ಲಿ ಹೀಗೆ ಎಲ್ಲಾ ಕಡೆ ಬೆಳೆಯುತ್ತಾರೆ. ಮೇಲ್ನೋಟಕ್ಕೆ ಪುನಾರ್ಪುಳಿಯ ರೀತಿಯೇ ಕಾಣುವುದಾದರೂ ಇದು ಪುನಾರ್ಪುಳಿ ಹಣ್ಣಲ್ಲ. ಬಹುತೇಕ ಮಾವಿನಹಣ್ಣಿನಂತೆ ರುಚಿ ಹೋಲುವುದರಿಂದ ಇದನ್ನು ಮ್ಯಾಂಗೋಸ್ಟೀನ್ ಎಂದು ಕರೆಯಲಾಗುತ್ತದೆ.
ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಮ್ಯಾಂಗೋ ಸ್ಟೀನ್ ಹಣ್ಣನ್ನು ನೇರಳೆ ಮ್ಯಾಂಗೊಸ್ಟೀನ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಈ ಹಣ್ಣಿನ ಇನ್ನೊಂದು ಪ್ರಮುಖ ಗುಣವೆಂದರೆ ಔಷಧೀಯ ಕಾರ್ಯಗಳಿಗಾಗಿಯೂ ಇದು ಬಳಕೆಯಾಗುತ್ತದೆ.

ಅಂದ ಹಾಗೆ ಮ್ಯಾಂಗೋಸ್ಟೀನ್ ಹಣ್ಣಿನ ರಸ, ಕೆತ್ತೆಯನ್ನೂ ಮದ್ದಿಗಾಗಿ ಉಪಯೋಗಿಸುತ್ತಾರೆ. ಮಲಬದ್ಧತೆ, ಮೂತ್ರಜನಕಾಂಗದ ಸೋಂಕು, ಗೊನೊರೇಹಿಯಾ, ಕ್ಷಯ, ಮುಟ್ಟಿನ ಸಮಸ್ಯೆಗಳು, ಕ್ಯಾನ್ಸರ್, ಕರುಳಿನಲ್ಲಿ ಕಂಡು ಬರುವ ಸೋಂಕು ಮೊದಲಾದವುಗಳ ನಿವಾರಣೆಗೆ ಈ ಹಣ್ಣಿನ ರಸ ಉತ್ತಮವಾಗಿರುತ್ತದೆ.
ಇದಲ್ಲದೆ, ಮುಖದ ಮೊಡವೆ ಹಾಗೂ ಇತರ ಚರ್ಮ ಸಂಬಂಧಿ ತೊಂದರೆಗಳಿಗೆ ಮದ್ದಾಗಿಯೂ ಮ್ಯಾಂಗೋಸ್ಟೀನನ್ನು ಉಪಯೋಗಿಸಲಾಗುತ್ತದೆ. ಜಾಮ್ ಮಾಡಿಯೂ ಇದನ್ನು ಸೇವಿಸಬಹುದು. ಮ್ಯಾಂಗೋಸ್ಟೀನ್‌ನಲ್ಲಿರುವ ಸಸ್ಯ ಸಂಯುಕ್ತ ಗುಣವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕ್ಸಾಂಥೋನ್ ಮತ್ತು ಫೈಬರ್‌ನ ವಿಶಿಷ್ಟ ಸಂಯೋಜನೆಯು ರಕ್ತದಲ್ಲಿನ ಶುಗರ್ ಮಟ್ಟವನ್ನು ಸುಸ್ಥಿತಿಯಲ್ಲಿಟ್ಟು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಹಾಗೂ ಮಿನರಲ್‌ಗಳು ದೇಹವನ್ನು ಸುಸ್ಥಿತಿಯಲ್ಲಿಡಲು ಉಪಕಾರಿ. ಡಿಎನ್‌ಎ ಉತ್ಪಾದನೆ, ಗಾಯ ವಾಸಿಯಾಗುವಿಕೆ, ರೋಗನಿರೋಧಕ ಶಕ್ತಿ ಪ್ರಬಲಗೊಳಿಸುವಿಕೆ ಮೊದಲಾದವುಗಳಿಗೆ ಸಹಾಯಕವಾಗಿದೆ. ಚರ್ಮದ ಕೋಶಗಳನ್ನು ಸೂರ್ಯನ ವಿಕಿರಣಗಳಿಂದ ಮತ್ತು ಬಹಳ ಬೇಗ ಮುಪ್ಪಾದಂತೆ ಕಾಣುವುದರಿಂದ ರಕ್ಷಿಸುತ್ತದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಲೂ ಈ ಹಣ್ಣು ಸಹಕಾರಿ ಎಂದರೆ ನೀವು ನಂಬಲು ಬೇಕು. ಮ್ಯಾಂಗೋಸ್ಟೀನ್‌ನಲ್ಲಿ ಹೇರಳವಾದ ಆ್ಯಂಟಿ ಆಕ್ಸಿಡೆಂಟ್ ಗುಣವಿರುವುದರಿಂದ ಹೃದಯ, ಮೆದುಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ಹೃದಯದ ಆರೋಗ್ಯ
ಅನಗತ್ಯ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುವುದು ಮತ್ತು ಹೃದ್ರೋಗವನ್ನುಂಟು ಮಾಡುವ ಅಪಾಯದ ಅಂಶಗಳನ್ನು ಕಡಿಮೆ ಮಾಡುವ ಗುಣ ಮ್ಯಾಂಗೋ ಸ್ಟೀನ್ ಗಿದೆ.
ಮೆದುಳಿನ ಆರೋಗ್ಯ
ಮಾನಸಿಕ ಖಿನ್ನತೆ, ಮೆದುಳಿನ ಉರಿಯೂತ ಹೀಗೆ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲೂ ಮ್ಯಾಂಗೋ ಸ್ಟೀಮ್ ಪರಿಣಾಮಕಾರಿ ಎಂದು ನಂಬುತ್ತಾರೆ. ಆದರೆ, ಮ್ಯಾಂಗೊಸ್ಟೀನ್ ಹಣ್ಣು ಬಾಳಿಕೆ ಬರುವುದು ಕಡಿಮೆ. ಆದ್ದರಿಂದ ಇದನ್ನು ರಸ ಅಥವಾ ಪುಡಿಯ ರೂಪದಲ್ಲಿ ಶೇಖರಿಸಿಡುವುದು ಉತ್ತಮ. ಇದರಿಂದ ಫ್ರೆಶ್ ಜ್ಯೂಸನ್ನು ತಯಾರಿಸಬಹುದು.
ಮಾಡುವ ವಿಧಾನ
1 ಕಪ್ ಮ್ಯಾಂಗೋಸ್ಟೀನ್, 1 ಕಪ್ ಮಾವಿನಹಣ್ಣು, 1 ಕಪ್ ನೀರು, 1/4 ಕಪ್ ಸಕ್ಕರೆ ಮತ್ತು 1/2 ನಿಂಬೆ ರಸ ಇದನ್ನು ಬೆರೆಸಿ ಮಿಶ್ರಣ ಮಾಡಿ, ಫ್ರಿಡ್ಜ್‌ನಲ್ಲಿಟ್ಟು ಸೇವಿಸಬಹುದು.

ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಹಾಲುಣಿಸುವ ತಾಯಂದಿರು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಈ ಹಣ್ಣಿನ ಸೇವನೆ ಅಪಾಯ ತಂದೊಡ್ಡಬಲ್ಲದು ಎಂಬ ಮಾತಿದೆ. ಅಲ್ಲದೆ ರಕ್ತಸ್ರಾವ ಉಂಟಾದಲ್ಲಿ ಅಥವಾ ಶಸ್ತ್ರಚಿಕಿತ್ಸೆಯಾದವರು ತಕ್ಷಣವೇ ಈ ಹಣ್ಣನ್ನು ಸೇವಿಸಬಾರದೆನ್ನುತ್ತಾರೆ. ಹಾಗಾಗಿ ಅಳೆದು ತೂಗಿ ಉಪಯೋಗಿಸುವುದು ಒಳಿತು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ