ಮನುಷ್ಯನ ದೇಹದ ಸರ್ವತೋಮುಖ ಬೆಳವಣಿಗೆಯಲ್ಲಿ ಜೇನುತುಪ್ಪದ ಪಾತ್ರವೂ ಕೊಂಚ ಮಟ್ಟಿಗೆ ಇದೆ ಎಂದರೆ ನಂಬಲು ಸಾಧ್ಯವೇ? ಆಶ್ಚರ್ಯ ಎಂದೆನಿಸಿದರೂ ಇದು ನಂಬಲೇ ಬೇಕು. ಬಹುಶಃ ಅದಕ್ಕೆ ಇದನ್ನು ಅಮೃತ ಸಮಾನ ಎಂದು ಕರೆದಿರಬೇಕು. ಇನ್ನು ಆಯುರ್ವೇದ ಚಿಕಿತ್ಸೆಯಲ್ಲಂತೂ ಜೇನುತುಪ್ಪದೇ ರಾಜ್ಯಭಾರ. ಜೇನುತುಪ್ಪದ ಹೊರತಾಗಿ ಆಯುರ್ವೇದ ಚಿಕಿತ್ಸೆಯನ್ನು ಊಹಿಸುವುದು ಕೂಡಾ ಕಷ್ಟ ಎನ್ನಿ!

ನಮ್ಮ ದೇಹದ ಹಲವು ಆರೋಗ್ಯಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ಜೇನುತುಪ್ಪ ಹಳೆಯದಾದಷ್ಟು ಒಳ್ಳೆಯದು. ಚರ್ಮದ ಸಮಸ್ಯೆ, ರಕ್ತ ಶುದ್ಧಿ, ಜೀರ್ಣಶಕ್ತಿ, ಕಣ್ಣಿನ ಆರೋಗ್ಯ, ನಿದ್ರಾಹೀನತೆ ಹೀಗೆ ಅನೇಕ ಸಮಸ್ಯೆಗಳನ್ನು ನಿವಾರಿಸುವ ಜೇನುತುಪ್ಪ ರಕ್ತಸಂಚಾರ ಸರಾಗವಾಗಿ ಸಾಗುವಂತೆ ಮಾಡುತ್ತದೆ.

ಇನ್ನು ಜೇನುತುಪ್ಪವು ನೈಸರ್ಗಿಕವಾಗಿ ಸಿಹಿಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೂ ಇದು ಸಕ್ಕರೆಗಿಂತ ಒಳ್ಳೆಯದು. ಯಾಕೆಂದರೆ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ನಿಯಂತ್ರಿಸುವ ಶಕ್ತಿ ಜೇನುತುಪ್ಪಕ್ಕಿದೆ.

ಇಂದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯ ಮೆಷಿನ್ ಗಿಂತಲೂ ಜಾಸ್ತಿ ಬ್ಯುಸಿಯಾಗಿಬಿಟ್ಟಿದ್ದಾನೆ. ಜೊತೆಗೆ ಕೊಬ್ಬು ಕೂಡಾ ಆತನ ದೇಹ ಸೇರಿ ಬಿಟ್ಟಿರುತ್ತದೆ. ಈ ಕೊಬ್ಬು, ಬೊಜ್ಜು ಕಡಿಮೆ ಮಾಡುವ ಶಕ್ತಿ ರುಚಿಯಾದ ಜೇನುತುಪ್ಪಕ್ಕಿದೆ. ಹೌದು, ಪ್ರತಿದಿನ ಬಿಸಿನೀರಿಗೆ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರಿಗೆ ಜೇನು ಹಾಕಿ ಕಲಸಿ ಕುಡಿಯುವುದರಿಂದ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಬೆಳಗ್ಗೆ ಎದ್ದು ಚಹಾ ಕುಡಿಯುವ ಅಭ್ಯಾಸ ಇರುವವರು ಸಕ್ಕರೆಯ ಬದಲು ಜೇನುತುಪ್ಪವನ್ನು ಕೂಡಾ ಬಳಸಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೇನುತುಪ್ಪದಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೇರಳವಾಗಿದೆ.

ಜೇನುತುಪ್ಪದ ಆರೋಗ್ಯ ಪುರಾಣ ಓದಿ ಆಯಿತಲ್ಲ.. ಔಷಧಿಯ ಆಗರ ಆಗಿರುವ ಜೇನುತುಪ್ಪವನ್ನು ಖರೀದಿಸುವಾಗ ತುಂಬಾ ಜಾಗ್ರತೆ ವಹಿಸಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕಲಬೆರಕೆಯಾಗಿರುವ ಜೇನು ಸಿಗುತ್ತದೆ. ಆದುದರಿಂದ ನೀವು ಖರೀದಿ ಮಾಡುವ ಜೇನು ಕಲಬೆರಕೆಗೆ ಒಳಗಾಗಿದೆಯಾ ಎಂದು ಪರೀಕ್ಷಿಸುವುದು ಕೂಡಾ ತುಂಬಾ ಮುಖ್ಯ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ