ಸಾರು, ಸಾಂಬಾರು, ಪಲ್ಯ ಮಾಡುವ ಅಡುಗೆ ಯಾವುದೇ ಆಗಿರಲಿ, ಅದಕ್ಕೆ ಕೊನೆಯಲ್ಲಿ ಒಗ್ಗರಣೆ ಹಾಕಿದ ನಂತರವೇ ಮಾಡಿದ ಅಡುಗೆ ಮುಕ್ತಾಯಗೊಂಡಂತೆ. ಅಷ್ಟೇ ಅಲ್ಲದೇ ಅಡುಗೆಯ ಕೊನೆಯಲ್ಲಿ ಹಾಕುವ ಒಗ್ಗರಣೆಯು ಅಡುಗೆಯ ರುಚಿಯನ್ನು ಕೂಡಾ ಹೆಚ್ಚಿಸುತ್ತದೆ. ಮುಖ್ಯವಾದ ವಿಚಾರವೆಂದರೆ ಈ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಅಡುಗೆಯ ಘಮ ಹೆಚ್ಚಿಸುವುದಲ್ಲದೇ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿ.

ಊಟ ಮಾಡುವಾಗ ಸಾರು, ಸಾಂಬಾರು, ಪಲ್ಯ ದಲ್ಲಿ ದೊರೆಯುವ ಕರಿಬೇವನ್ನು ಇದು ನನಗೆ ಬೇಡ ಎಂದು ತಟ್ಟೆಯ ಬದಿಯಲ್ಲಿ ತೆಗೆದು ಇಡುವವರೇ ಹೆಚ್ಚು. ಬೇಡ ಎಂದು ತಟ್ಟೆಯ ಬದಿಯಲ್ಲಿ ಇಡುವ ಕರಿಬೇವು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂಬ ವಿಚಾರ ಅನೇಕರಿಗೆ ತಿಳಿದಂತಿಲ್ಲ.

ಕಾಲಾಶಕ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಕರಿಬೇವಿಗೆ ಅನೇಕ ಕಾಯಿಲೆಗಳನ್ನು ದೂರ ಮಾಡುವ ಶಕ್ತಿಯಿದೆ.
ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರಹಾಕುವ ಕರಿಬೇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಡೆಗೆ ಸಂಬಂಧ ಪಟ್ಟ ಖಾಯಿಲೆಗಳ ಜೊತೆಗೆ ಕಫ, ಪಿತ್ತ, ಮಧುಮೇಹ, ರಕ್ತದೊತ್ತಡ, ಮಲಬದ್ಧತೆ, ಬೇಧಿ ಹೀಗೆ ಅನೇಕ ರೋಗಗಳಿಗೆ ಮನೆಯಂಗಳದ ಕರಿಬೇವು ಹೇಳಿ ಮಾಡಿಸಿದ ಮದ್ದು.

ಮಧುಮೇಹವನ್ನು ನಿಯಂತ್ರಣದಲ್ಲಿರುವ ಶಕ್ತಿ ಈ ಪುಟ್ಟ ಕರಿಬೇವಿಗೆ ಇದೆ. ಆದುದರಿಂದ ಮಧುಮೇಹಿ ಇರುವವರು ಪ್ರತಿದಿನ ಕರಿಬೇವು ಸೇವಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ಹೆಚ್ಚಿನವರಿಗೆ ಬೆಳಗ್ಗೆ ಎದ್ದ ತಕ್ಷಣ ವಾಕರಿಕೆ ಸಮಸ್ಯೆ ಕಾಡುತ್ತಿರುತ್ತದೆ. ಅದಕ್ಕೆ ಇದು ಉತ್ತಮ.

ರಕ್ತಹೀನತೆಯನ್ನು ಹೋಗಲಾಡಿಸುವ ಕರಿಬೇವು ಆಗಾಗ ಕಂಡುಬರುವ ಎಸಿಡಿಟಿಗೆ ಉತ್ತಮ ಮದ್ದು ಹೌದು. ಸಾಮಾನ್ಯವಾಗಿ ಎಸಿಡಿಟಿಯಿಂದ ಹೊಟ್ಟೆ ಮತ್ತು ಎದೆಯ ಭಾಗಗಳಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಕರಿಬೇವಿನಿಂದ ಜ್ಯೂಸ್ ತಯಾರಿಸಿ ಅದನ್ನು ಕುಡಿಯಬೇಕು.

ಎಲ್ಲದಕ್ಕಿಂತಲೂ ಮುಖ್ಯವಾಗಿ ಆರ್ಯುವೇದ ಔಷಧಿಗಳ ತಯಾರಿಕೆಯಲ್ಲಿ ಕರಿಬೇವಿಗೆ ಪ್ರಮುಖ ಸ್ಥಾನ ಇರುವುದು ಹಲವರಿಗೆ ತಿಳಿದಿಲ್ಲ. ವಿಷವನ್ನು ಹೊರಹಾಕುವ ಶಕ್ತಿಯು ಕರಿಬೇವಿಗೆ ಇರುವ ಕಾರಣ ವಿಷ ಜಂತುಗಳು ಕಚ್ಚಿದ ಜಾಗಕ್ಕೆ ಇದರಿಂದ ತಯಾರಿಸಿದ ಪೇಸ್ಟ್ ಹಚ್ಚುತ್ತಾರೆ.

ಆರೋಗ್ಯವರ್ಧಕ ಗುಣಗಳನ್ನು ಹೊಂದಿರುವಂತಹ ಕರಿಬೇವು ಸೌಂದರ್ಯವರ್ಧಕವೂ ಹೌದು ಅನ್ನಿ! ಕರಿಬೇವಿನಲ್ಲಿ ಅಡಗಿಕೊಂಡಿರುವ ಪೋಷಕಾಂಶಗಳು ನಮ್ಮ ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯ ಜೊತೆಗೆ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಬೇಕು. ಹಾಗೇ ತಯಾರಿಸಿದ ಎಣ್ಣೆಯನ್ನು ವಾರಕ್ಕೆ ಒಂದು ಬಾರಿ ತಲೆಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಜೊತೆಗೆ ಕೂದಲು ಉದುರುವುದು ಕೂಡಾ ನಿಲ್ಲುತ್ತದೆ. ಇನ್ನು ಕೂದಲಿನ ಬುಡವನ್ನು ದೃಢಗೊಳಿಸುವ ಇದು ತಲೆಹೊಟ್ಟಿನ ನಿವಾರಣೆಗೂ ಸಹಕಾರಿ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ