ಕರಿಮೆಣಸನ್ನು ಸಂಸ್ಕೃತದಲ್ಲಿ ಮಾರಿಚ್ ಎಂದು ಕರೆಯಲಾಗುತ್ತದೆ; ಇದು ಸೂರ್ಯನ ಸಮಾನಾರ್ಥಕವಾಗಿದೆ. ಸೂರ್ಯನಂತೆ ದೇಹಕ್ಕೆ ಬಿಸಿಯ ಅನುಭವವನ್ನು ನೀಡುವುದರಿಂದಾಗಿ ಕಾಳುಮೆಣಸನ್ನು ಮಸಾಲೆಗಳ ರಾಜ ಎಂದೇ ಕರೆಯುತ್ತಾರೆ. ಬಹುಶಃ ಕರಿ ಮೆಣಸಿನ ಕಾಳು ಬಳಸದ ಮನೆಯಿರಲು ಸಾಧ್ಯವಿಲ್ಲ. ಸಾಧಾರಣವಾಗಿ ಒಂದು ಮನೆಯ ಅನೇಕ ಕಾರ್ಯಗಳಲ್ಲಿ ಕರಿಮೆಣಸಿನ ಕಾಳು ಬಳಕೆಯಾಗುತ್ತದೆ. ಆಯುರ್ವೇದದಲ್ಲಿ ಕಾಳು ಮೆಣಸನ್ನು ಅನೇಕ ರೀತಿಯಲ್ಲಿ ಔಷಧವಾಗಿ ಬಳಸಲಾಗುತ್ತದೆ. ಶೀತ, ಕೆಮ್ಮು, ಗಂಟಲಿನ ಕಿರಿಕಿರಿಗೆ ಫಟಾಫಟ್ ಎಂದು ಪರಿಹಾರ ನೀಡುವ ಇದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ
ಈ ಕಾಳು ಮೆಣಸು ಅಥವಾ ಕರಿ ಮೆಣಸು ಖಾರ ಹಾಗೂ ತೀಕ್ಷ್ಣವಾಗಿರುವುದರಿಂದ ಜೀರ್ಣಕ್ರಿಯೆಗೆ ಸುಲಭವಾದರೂ, ದೇಹಕ್ಕೆ ಉಷ್ಣವಾಗಿದೆ. ಹೀಗಾಗಿ ಮಿತವಾಗಿ ತಿಂದಷ್ಟೂ ಒಳ್ಳೆಯದು. ಕಫ, ವಾತದಿಂದಾಗುವ ಅನಾರೋಗ್ಯಕ್ಕೆ ಬಹಳ ಒಳ್ಳೆಯದು.

ಕಾಳು ಮೆಣಸನ್ನು ಹೆಚ್ಚು ಸೇವನೆ ಮಾಡುವುದರಿಂದ ದೇಹದಲ್ಲಿ ಪಿತ್ತದ ಅಂಶ ಹೆಚ್ಚಾಗಿ ಇನ್ನೊಂದು ಅನಾರೋಗ್ಯ ಬರುವಂತಹ ಸಾಧ್ಯತೆಗಳಿರುವುದರಿಂದ ಕಡಿಮೆ ಸೇವನೆ ಮಾಡುವುದು ಉತ್ತಮ.
ಮೊಡವೆ ನಿವಾರಣೆಗೆ ಉತ್ತಮ
ಕಾಳು ಮೆಣಸಿನಲ್ಲಿರುವ ಆಂಟಿ ಮೈಕ್ರೋವೆಲ್ ಗುಣದಿಂದ ಇದು ಮೊಡವೆಗಳನ್ನು ನಿವಾರಿಸುತ್ತದೆ. ಕಾಳು ಮೆಣಸಿನ ಪುಡಿಯನ್ನು ರೋಸ್ ವಾಟರ್ ಅಥವಾ ನೀರಿನೊಂದಿಗೆ ಬೆರೆಸಿ ಮೊಡವೆ ಮೇಲೆ ಹಚ್ಚಿದರೆ ಮುಖದ ಮೇಲಿನ ಮೊಡವೆ ನಿವಾರಣೆಯಾಗುತ್ತದೆ.
ವಾಂತಿ ಮತ್ತು ಅಜೀರ್ಣ ಪರಿಹಾರ
ಕರಿ ಮೆಣಸಿನ ಕಾಳಿನ ಪುಡಿಯನ್ನು ಬಿಸಿ ನೀರಿಗೆ ಹಾಕಿ ಅದಕ್ಕೆ ಸ್ವಲ್ಪ ಶುಂಠಿಯನ್ನು ಹಾಕಿ ಸೇವಿಸಿದರೆ ವಾಂತಿಯ ಸಮಸ್ಯೆ ಇದ್ದರೆ ಅಥವಾ ಅಜೀರ್ಣವಾಗಿದ್ದಲ್ಲಿ ಸರಿ ಹೋಗುತ್ತದೆ.
ದಿನಕ್ಕೆ ಒಂದು ಬಾರಿ ಸೇವನೆ ಮಾಡಿದರೆ ಸಾಕಾಗುತ್ತದೆ. ಅಲ್ಲದೆ ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ತುಪ್ಪದೊಂದಿಗೆ ಸೇವನೆ ಮಾಡಿದರೆ ಜೀರ್ಣ ಶಕ್ತಿಯೂ ಉತ್ತಮವಾಗುತ್ತದೆ.

ತ್ರಿಕಟು ಪೌಡರ್
ಆಯುರ್ವೇದದಲ್ಲಿ ಅಜೀರ್ಣ ಸಮಸ್ಯೆಗೆ, ಶೀತ, ಜ್ವರ ಕೆಮ್ಮಿಗೆ ಈ ತ್ರಿಕಟು ಪೌಡರ್ ಬಹಳ ಒಳ್ಳೆಯದು. ಇದನ್ನು ಹಿಪ್ಪಲಿ, ಶುಂಠಿ ಮತ್ತು ಕಾಳು ಮೆಣಸನ್ನು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಒಂದು ಚಿಟಿಕೆಯಷ್ಟು ಸೇವನೆ ಮಾಡುವುದು ಒಳ್ಳೆಯದು. ಕಾಳು ಮೆಣಸಿನ ಪೌಡರನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಅಲರ್ಜಿ ಶೀತ, ಮೂಗಿನ ಸೋರುವಿಕೆ, ಕೆಮ್ಮು ನಿವಾರಣೆಯಾಗುತ್ತದೆ.
ಕೂದಲು ಉದುರುವಿಕೆಗೆ ಮದ್ದು
ಕೆಲವರಿಗೆ ತಲೆಯ ಮೇಲೆ ಅಲ್ಲಲ್ಲಿ ಕೂದಲು ಉದುರಿ ಪ್ಯಾಚಸ್‌ಗಳು ಕಂಡುಬರುತ್ತವೆ. ಅದನ್ನು ನಿವಾರಿಸಲು ಕಾಳು ಮೆಣಸು ಸಹಕಾರಿಯಾಗಿದೆ. ಕಾಳು ಮೆಣಸನ್ನು ಎಳ್ಳೆಣ್ಣೆ ಮತ್ತು ತ್ರಿಫಲಾ ಪೌಡರ್‌ನ ಜೊತೆ ಸೇರಿಸಿ ಕೂದಲು ಉದುರಿದ ಜಾಗದಲ್ಲಿ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಹೊಟ್ಟೆಯ ಸೆಳೆತಕ್ಕೆ ರಾಮಬಾಣ
ಕೆಲವೊಮ್ಮೆ ಅಜೀರ್ಣದಿಂದ ಅಥವಾ ಏನಾದರೂ ಸೋಂಕು ತಗುಲಿದ್ದರೆ ಹೊಟ್ಟೆಯಲ್ಲಿ ಸೆಳೆಯುವ ಅನುಭವವಾಗುತ್ತದೆ. ಇದಕ್ಕೆ ಕಾಳು ಮೆಣಸಿನ ಪುಡಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಸೇವನೆ ಮಾಡಿದರೆ ಹೊಟ್ಟೆ ನೋವು, ಹೊಟ್ಟೆಯ ಸೆಳೆತ ಮುಂತಾದವು ನಿವಾರಣೆಯಾಗುತ್ತದೆ. ಜೊತೆಗೆ ಹೊಟ್ಟೆಯಲ್ಲಿ ಹುಳದ ಸಮಸ್ಯೆ ಇದ್ದರೆ ಅದನ್ನು ಹೋಗಲಾಡಿಸುವಲ್ಲೂ ಕಾಳು ಮೆಣಸು ಪರಿಣಾಮಕಾರಿ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ