ಪ್ರಕೃತಿದತ್ತವಾಗಿ ಸಿಗುವ ಎಲ್ಲಾ ಪದಾರ್ಥಗಳಲ್ಲಿಯೂ ಔಷಧೀಯ ಗುಣ, ಸತ್ವ ಇದ್ದೇ ಇರುತ್ತದೆ. ಇಂದು ಅಂಥದ್ದೇ ಒಂದು ಪದಾರ್ಥದ ಬಗ್ಗೆ ತಿಳಿಯೋಣ. ಅದುವೇ ನೆಲ್ಲಿಕಾಯಿ.

ನೆಲ್ಲಿಕಾಯಿಯ ಉಪ್ಪಿನಕಾಯಿ, ಚಟ್ನಿ , ತಂಬುಳಿ, ಮುರಬ್ಬಸ್ ಇತ್ಯಾದಿ ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದಿರುವ ಆಹಾರ ಪದಾರ್ಥಗಳು. ಇದರಲ್ಲಿ ಔಷಧೀಯ ಗುಣಗಳೂ ಬಹಳಷ್ಟಿದೆ. ಆಯುರ್ವೇದದಲ್ಲೂ ಇದರ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾಹಿತಿ ಇದೆ. ಇದಲ್ಲದೆ ನೆಲ್ಲಿಕಾಯಿಯನ್ನು ಇಂದು ಕಾಸ್ಮೆಟಿಕ್ಸ್ ಗಳಲ್ಲಿಯೂ ಬಳಸಲಾಗುತ್ತಿದೆ ಎಂಬುದು ವಿಶೇಷ.

ನೆಲ್ಲಿಕಾಯಿಯನ್ನು ಬಳಸಿ ತಯಾರಿಸಿದ ಹಲವು ಉತ್ಪನ್ನಗಳು ಇಂದು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಇದರಲ್ಲಿರುವ ಔಷಧೀಯ ಗುಣಗಳು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಸಹಕಾರಿ. ಉತ್ತಮ ಉದಾಹರಣೆ ಎಂದರೆ ಕೂದಲಿನ ಆರೈಕೆಗೆ ಬಳಸಲ್ಪಡುವ ಹಲವಾರು ಶ್ಯಾಂಪೂಗಳಲ್ಲಿ ನೆಲ್ಲಿಕಾಯಿ ಉಪಯೋಗಿಸಲಾಗುತ್ತಿದ್ದು ಕೂದಲಿನ ಆರೈಕೆಗೆ ಇದು ಬಹಳ ಮುಖ್ಯ. ಉದ್ದ ದಟ್ಟ ಕೂದಲಿಗೆ, ಕೂದಲುದುರುವಿಕೆಯನ್ನು ತಡೆಯಲು ನೆಲ್ಲಿಕಾಯಿ ಸೇವನೆ ಸಹಕಾರಿ.

ರುಚಿಯಲ್ಲಿ ಇದು ತುಸು ಹುಳಿಹುಳಿಯಾಗಿದ್ದರೂ ಉತ್ತಮ ಜೀರ್ಣಕ್ರಿಯೆಗೆ ನೆಲ್ಲಿಕಾಯಿಯನ್ನು ತಿನ್ನುವುದು ಒಳ್ಳೆಯದು. ಇದು ಕರುಳಿನ ಕೆಲಸ ಸರಾಗವಾಗಿ ನಡೆಯಲು ಸಹಕರಿಸುತ್ತದೆ. ಇದರಲ್ಲಿರುವ ನಾರಿನಾಂಶ ಇರುವುದರಿಂದ ಮಲಬದ್ಧತೆಯನ್ನು ಸುಲಭವಾಗಿ ನಿವಾರಿಸುವುದರ ಜೊತೆಗೆ ಹೊಟ್ಟೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇನ್ನು ಬೇಧಿಯ ಸಮಸ್ಯೆಗೂ ಇದು ಉತ್ತಮ ಮದ್ದು. ಎಲ್ಲದಕ್ಕಿಂತಲೂ ಮುಖ್ಯವಾಗಿ ಜೀರ್ಣಕ್ರಿಯೆ ಸುಗಮವಾಗಿ ನಡೆಯುವಂತೆ ಇದು ಮಾಡುತ್ತದೆ.

ಸಂಸ್ಕ್ರತದಲ್ಲಿ ಆಮ್ಲಕಿ ಎಂದು ಕರೆಯಲ್ಪಡುವ ನೆಲ್ಲಿಕಾಯಿಯನ್ನು ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ನೆಲ್ಲಿಕಾಯಿಯಲ್ಲಿ ಇರುವ ಕ್ರೋಮಿಯಂ ಅಂಶ ಮಧುಮೇಹಿಗಳಿಗೆ ಉತ್ತಮವಾದುದು. ರಕ್ತದಲ್ಲಿನ ಸಕ್ಕರೆ ಮಟ್ಟ ಕಮ್ಮಿ ಮಾಡುವ ಶಕ್ತಿ ಇರುವ ಇದು ದೇಹದಲ್ಲಿರುವ ಗ್ಲುಕೋಸ್ ಅಂಶವನ್ನು ಬಳಸುವಂತೆ ಉತ್ತೇಜನ ನೀಡುವುದು. ಇದರ ಜೊತೆಗೆ ನೆಲ್ಲಿಕಾಯಿಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವ ಕೆಲಸವನ್ನೂ ಮಾಡುತ್ತದೆ.

ನೆಲ್ಲಿಕಾಯಿ ನಾವು ತಿಂದ ಆಹಾರ ಪದಾರ್ಥಗಳಿಂದ ಪೋಷಕಾಂಶಗಳನ್ನು ಸರಾಗವಾಗಿ ಹೀರಿಕೊಳ್ಳುತ್ತದೆ. ಅಂದರೆ ಮೂಳೆ, ಹಲ್ಲು, ಉಗುರುಗಳಿಗೆ ಅಗತ್ಯವಿರುವಂತಹ ಕ್ಯಾಲ್ಸಿಯಂನ್ನು ಆಹಾರಗಳಿಂದ ಹೀರಿಕೊಳ್ಳುವ ಕಾರ್ಯ ಮಾಡುತ್ತದೆ.

ಇದರ ಜ್ಯೂಸ್ ಅಂತೂ ದೇಹದಕ್ಕೆ ಬೇಡವಾದ ವಿಷಕಾರಿ ಅಂದರೆ ಟಾಕ್ಸಿಕ್ ಅಂಶಗಳನ್ನು ಹೊರಹಾಕುತ್ತದೆ. ಇದರಲ್ಲಿ ನೀರಿನಂಶ ಬಹಳಷ್ಟಿರುವುದರಿಂದ ಇದು ಮೂತ್ರವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಇದು ದೇಹದಲ್ಲಿನ ಹೆಚ್ಚಿನ ಪ್ರಮಾಣದ ನೀರು, ಅಥವಾ ಕಿಡ್ನಿಯಲ್ಲಿನ ಕಲ್ಲನ್ನು ಹೊರಹಾಕಲು ಬಹಳ ಸಹಕಾರಿ. ಕಿಡ್ನಿ ಹಾಗೂ ಮೂತ್ರನಾಳಗಳ ಆರೋಗ್ಯಕ್ಕೂ ಒಳ್ಳೆಯದು. ಮೂತ್ರಕೋಶದ ಸೋಂಕನ್ನು ನಿವಾರಣೆ ಮಾಡುವ ಶಕ್ತಿ ಈ ಪುಟ್ಟ ನೆಲ್ಲಿಕಾಯಿಯಲ್ಲಿದೆ.

ನೆಲ್ಲಿಕಾಯಿ ಸೇವನೆಯಿಂದಾಗಿ ಬಿಳಿರಕ್ತಕಣ ವೃದ್ಧಿಯಾಗುತ್ತದೆ. ತೂಕ ಇಳಿಕೆಗೂ ನೆಲ್ಲಿಕಾಯಿ ಪ್ರಯೋಜನಕಾರಿ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಿ ಕೊಬ್ಬನ್ನು ಕರಗಿ ಹೋಗುತ್ತದೆ. ಕೊಲೆಸ್ಟ್ರಾಲ್ ನ್ನು ತಗ್ಗಿಸಿ ನಿಯಂತ್ರಣದಲ್ಲಿಡುವ ನೆಲ್ಲಿಕಾಯಿಯು ದೇಹದಲ್ಲಿನ ಪ್ರೊಟೀನ್ ಅಂಶವನ್ನು ಹೆಚ್ಚಿಸುತ್ತದೆ.

ಕೈ ಮುಷ್ಟಿಯಷ್ಟೂ ಇಲ್ಲದ ಈ ಪಟ್ಟ ನೆಲ್ಲಿಕಾಯಿಯ ಉಪಯೋಗಗಳು ಅಷ್ಟಿಷ್ಟಲ್ಲ. ಆಗಾಗ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಇದನ್ನು ಬಳಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.