ಪಂಚಭಾಷಾ ತಾರೆ ಎಂದೇ ಬಣ್ಣದ ಲೋಕದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹರ್ಷಿಕಾ ಪೂಣಚ್ಚ ಸಿಹಿಸುದ್ದಿಯನ್ನು ನೀಡಿದ್ದಾರೆ. ಇಷ್ಟು ದಿನಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ್ದ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಈಗ ಡಿಜಿಟಲ್ ಜಗತ್ತಿನಲ್ಲಿ ಮೋಡಿ ಮಾಡಲಿದ್ದಾರೆ.

ಕಮರ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇನ್ನೂ ಹೆಸರಿಡದ ವೆಬ್ ಸರಣಿಯಲ್ಲಿ ಅಭಿನಯಿಸಲಿದ್ದಾರೆ ಹರ್ಷಿಕಾ ಪೂಣಚ್ಚ. ಈ ವೆಬ್ ಸರಣಿಯಲ್ಲಿ ಹರ್ಷಿಕಾ ಖುಷಿ ಎನ್ನುವ ಪಾತ್ರದಲ್ಲಿ ಅಭಿನಯಿಸಲಿದ್ದು, ಈ ಸಂತಸದ ವಿಚಾರವನ್ನು ಸ್ವತಃ ಹರ್ಷಿಕಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

“ಮೊದಲ ಬಾರಿಗೆ ವೆಬ್ ಸಿರೀಸ್ ನಲ್ಲಿ ಅಭಿನಯಿಸುತ್ತಿದ್ದೇನೆ. ಇದು ನಾಲ್ಕು ಜನ ಪ್ರವಾಸಕ್ಮೆ ಹೋಗುವ ಹುಡುಗಿಯರ ಕುರಿತಾದ ವೆಬ್ ಸರಣಿಯಾಗಿದೆ. ಇದು ಸಂಪೂರ್ಣ ನೈಜತೆಯಿಂದ ಕೂಡಿದ್ದು ಪ್ರಭಾವಶಾಲಿಯಾಗಿದೆ” ಎಂದು ಹೇಳುವ ಹರ್ಷಿಕಾ ಹೆಚ್ಚಿನ ವಿಚಾರಗಳನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

ವೆಬ್ ಸಿರೀಸ್ ಹೊರತಾಗಿ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚುತ್ತಿರುವ ಹರ್ಷಿಕಾ ಇತ್ತೀಚೆಗಷ್ಟೇ ಲಯ ಕೋಕಿಲಾ ನಿರ್ದೇಶನದ ಥೇಟ್ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ ಕಾಸಿನ ಸರ ಮತ್ತು ಕಾಳ ನಾಗಿಣಿಯಲ್ಲಿ ನಟಿಸಲಿದ್ದಾರೆ.

ಪಿಯುಸಿ ಸಿನಿಮಾದ ಗೌರಿಯಾಗಿ ನಟನೆಗೆ ಕಾಲಿಟ್ಟ ಹರ್ಷಿಕಾ ಪೂಣಚ್ಚ ಮುಂದೆ ಕೊಡವ ಸಿನಿಮಾ ಪೊನ್ನಮ್ಮ ದಲ್ಲಿ ಅಭಿನಯಿಸಿದ್ದರು. ನಂತರ ಕಜರ್ ಎನ್ನುವ ಕೊಂಕಣಿ ಸಿನಿಮಾದಲ್ಲಿ ನಟಿಸಿದ್ದ ಈಕೆ ತೆಲುಗಿನ ಏಡುಕೊಂಡಲವಾಡ ವೆಂಕಟರಮಣ ಅಂದರು ಬಾಗುಂಡಾಲಿ ಚಿತ್ರದಲ್ಲಿ ಮೋಡಿ ಮಾಡಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜಾಕಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಹರ್ಷಿಕಾ ಪೂಣಚ್ಚ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ತಮಸ್ಸು ಚಿತ್ರದಲ್ಲಿ ಅಭಿನಯಿಸಿದ್ದರು. ಸಂತೋಷವೆಂದರೆ ಆ ಸಿನಿಮಾದ ನಟನೆಗೆ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ಜುಗಾರಿ, ನಾರಿಯ ಸೀರೆ ಕದ್ದ, ಮುರಳಿ ಮೀಟ್ಸ್ ಮೀರಾ,5 ಈಡಿಯೆಟ್ಸ್ , ಕೋ ಕೋ, ಕ್ರೇಜಿ ಲೋಕ, ಸೈಕಲ್, ಅಲೆ,ಮಂಗನ ಕೈಲಿ ಮಾಣಿಕ್ಯ, ಅದ್ವೈತ, ಬಿ3, ಮರ್ಯಾದೆ, ರೇ , ಬೀಟ್, ಉಪೇಂದ್ರ ಮತ್ತೆ ಬಾ, ಚಿಟ್ಟೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಈಕೆ ಕನ್ನಡದ ಜೊತೆಗೆ ಮಲೆಯಾಳಂ, ತೆಲುಗು ,ತಮಿಳು ಹಾಗೂ ಭೋಜ್ ಪುರಿ ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಇದರ ಜೊತೆಗೆ ಹಿರಿತೆರೆಯಲ್ಲಿ ಬೆಳ್ಳಿಹಬ್ಬವನ್ನು ಆಚರಿಸಲಿರುವ ಹರ್ಷಿಕಾ ಪೂಣಚ್ಚ ಯಾವ ಸಿನಿಮಾ ನನ್ನ 25 ನೇ ಸಿನಿಮಾವಾಗಲಿದೆ ಎಂಬುದು ಇನ್ನು ಕೂಡಾ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ