ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ವಿಶ್ವಾಸ್ ದೇಸಾಯಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಹರೀಶ್ ರಾಜ್ ಪ್ರಸ್ತುತ ಆರ್ಯವರ್ಧನ್ ಆಗಿ ಬದಲಾಗಿರುವ ವಿಚಾರ ಸೀರಿಯಲ್ ಪ್ರಿಯರಿಗೆ ತಿಳಿದೇ ಇದೆ. ಮನೋಜ್ಞ ನಟನೆಯ ಮೂಲಕ ಜೊತೆಜೊತೆಯಲಿ ಧಾರಾವಾಹಿಯ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹರೀಶ್ ರಾಜ್ ಅವರ ಬಣ್ಣದ ಪಯಣಕ್ಕೆ 25 ರ ಹರೆಯ.

‘ಹೊಸ ಚಿಗುರು ಹಳೇ ಬೇರು’ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಹರೀಶ್ ರಾಜ್ ನಟನೆಯ ಜೊತೆಗೆ ನಿರ್ದೇಶಕರಾಗಿ ಗುರುತಿಸಿಕೊಂಡ ಪ್ರತಿಭೆ. ಕಲಾಕಾರ್ ಸಿನಿಮಾದ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದ ಹರೀಶ್ ರಾಜ್ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡಿರುವ ಹರೀಶ್ ರಾಜ್ ಅವರಿಗೆ ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ವಿಶೇಷ ಒಲವು. ಕನ್ನಡ ಸಿನಿಮಾರಂಗದ ದಿಗ್ಗಜರನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದ ಹರೀಶ್ ರಾಜ್ ಕನಸು ನನಸು ಮಾಡಿಕೊಂಡ ಪ್ರತಿಭಾವಂತ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಮಣಿರತ್ನಂ, ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿರುವ ಹರೀಶ್ ರಾಜ್ ಇಲ್ಲಿಯ ತನಕ 70ಕ್ಕೂ ಹೆಚ್ಚು ಸಿನಿಮಾಗಳ ಜೊತೆಗೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವಂತಹ ದ್ವೀಪ, ಕೂರ್ಮಾವತಾರ, ತಾಯಿ ಸಾಹೇಬ ಹಾಗೂ ಕಾನೂರು ಹೆಗ್ಗಡತಿ ಸಿನಿಮಾಗಳ ಪಾತ್ರಗಳಿಂದ ಹರೀಶ್ ರಾಜ್ ಅವರನ್ನು ಜನ ಇಂದಿಗೂ ಗುರುತಿಸುತ್ತಾರೆ.

ಕಿರುತೆರೆಯಾಗಲೀ, ಹಿರಿತೆರೆಯಾಗಲೀ ಜೀವ ತುಂಬುವುದೊಂದೇ ಕಲಾವಿದನ ಕೆಲಸ ಎಂದು ಹೇಳುವ ಹರೀಶ್ ರಾಜ್ ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾದ ‘ಶ್ರೀ ಸತ್ಯನಾರಾಯಣ’ ಎಂಬ ಚಿತ್ರ ಲಿಮ್ಕಾ ಬುಕ್ ರೆಕಾರ್ಡ್ ನಲ್ಲಿ ದಾಖಲೆ ಬರೆಯಿತು. ಅಂದ ಹಾಗೇ ಈ ಸಿನಿಮಾದ ವಿಶೇಷ ಎಂದರೆ ಅದರಲ್ಲಿ ಹರೀಶ್ ಒಟ್ಟು 16 ಪಾತ್ರಗಳನ್ನು ನಿರ್ವಹಿಸಿದ್ದರು.

ಸದ್ಯ ಝೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹರೀಶ್ ರಾಜ್ ಮೊದಲಿಗೆ ಆರ್ಯವರ್ಧನ್ ಅವರ ತಮ್ಮ ವಿಶ್ವಾಸ್ ದೇಸಾಯಿ ಎಂಬ ಪಾತ್ರದ ಮೂಲಕ ಧಾರಾವಾಹಿಗೆ ಎಂಟ್ರಿ ಕೊಡುತ್ತಾರೆ. ನಂತರ ಸನ್ನಿವೇಶಗಳ ಬದಲಾವಣೆಯ ಸಲುವಾಗಿ ಆರ್ಯವರ್ಧನ್ ಅವರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಂದ ಹಾಗೇ ಆರ್ಯವರ್ಧನ್ ಅವರ ಪಾತ್ರಕ್ಕೆ ವೀಕ್ಷಕರಿಂದ ಪಾಸಿಟಿವ್ ಹಾಗೂ ನೆಗೆಟಿವ್ ಕಮೆಂಟ್ ಗಳು ಕೇಳಿ ಬರುತ್ತಿದ್ದವು. ನೆಗೆಟಿವ್ ವಿಚಾರಗಳಿಗಿಂತ ಪಾಸಿಟಿವ್ ವಿಚಾರಗಳೇ ನನ್ನನ್ನು ಸೆಳೆಯುವುದು ಹೆಚ್ಚು ಎಂದು ಹೇಳುವ ಹರೀಶ್ ರಾಜ್ ಆರ್ಯವರ್ಧನ್ ಪಾತ್ರದಿಂದಾಗಿ ನಾನು ಜನರಿಗೆ ಹತ್ತಿರವಾಗಲಿದ್ದೇನೆ ಎನ್ನುತ್ತಾರೆ.

ಇನ್ನು ಇದರ ಜೊತೆಗೆ ಕೋಮಲ್ ಅವರೊಂದಿಗೆ 2020 ಸಿನಿಮಾದಲ್ಲಿ ಹರೀಶ್ ರಾಜ್ ಅಭಿನಯಿಸಿದ್ದು ಅದು ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಮಾತ್ರವಲ್ಲದೇ ತಮ್ಮದೇ ಬ್ಯಾನರ್ ಅಡಿಯಲ್ಲಿ ಹಾರರ್ ಚಿತ್ರವೊಂದನ್ನು ನಿರ್ದೇಶನದ ಮಾಡಲಿದ್ದಾರೆ ಹರೀಶ್ ರಾಜ್.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ