ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕಾಂಬಿನೇಷನ್ ಮಗದೊಮ್ಮೆ ಗೆದ್ದಿದೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಕೆಲವು ವರ್ಷಗಳ ಹಿಂದೆ ಸದ್ದು ಮಾಡಿದ್ದ ಗಾಳಿಪಟ ಸಿನಿಮಾದ ಸೀಕ್ವೆಲ್ ಬಿಡುಗಡೆಯಾಗಿದ್ದು ಸಕತ್ ಸದ್ದು ಮಾಡುತ್ತಿದೆ. ಗಾಳಿಪಟ 2 ಸಿನಿಮಾ ಹಿಟ್ ಆಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಖುಷಿಯಿಂದ ಕಳೆದುಹೋಗಿದ್ದಾರೆ.
ಅಂದ ಹಾಗೇ ತುಂಬಾ ಸಮಯದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಗೆದ್ದಿದ್ದು ಅದೇ ನೆಪದಲ್ಲಿ ಸಕ್ಸಸ್ ಮೀಟ್ ಕೂಡಾ ಮಾಡಿ ಸಂಭ್ರಮ ಪಟ್ಟುಕೊಂಡಿದ್ದಾರೆ. ಆ ಮೂಲಕ ಸಿನಿಮಾ ತಂಡದ ಜೊತೆಗೆ ಸಿನಿ ಪ್ರಿಯರಿಗೂ ಧನ್ಯವಾದ ಸಮರ್ಪಿಸಿದ್ದಾರೆ ಗಣೇಶ್.

ಇನ್ನು ಮುಖ್ಯವಾದ ವಿಚಾರವೆಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅಭಿಮಾನಿಗಳು,
ಮಾಧ್ಯಮ ಮಿತ್ರರು, ವಿತರಕರು ಹಾಗೂ ಪ್ರದರ್ಶಕರಿಗೆ ಪತ್ರ ಮುಖೇನ ಧನ್ಯವಾದ ತಿಳಿದಿದ್ದಾರೆ. ನಮ್ಮ ‘ಗಾಳಿಪಟ 2’ ಚಿತ್ರವನ್ನು ನೀವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಅಭಿಮಾನಿಗಳು ಸಂಭ್ರಮಿಸುವ ಪ್ರತಿ ಕ್ಷಣವೂ ಕಲಾವಿದನನ್ನು ಆಶೀರ್ವದಿಸಿದಂತೆ. ಆ ನಿಟ್ಟಿನಲ್ಲಿ ನಾನು ನಿಜಕ್ಕೂ ಅದೃಷ್ಟವಂತ. ನನ್ನ ಮೊದಲನೇ ಸಿನಿಮಾದಿಂದ ಶುರುವಾಗಿ ಈಗಿನವರೆಗೂ ನನ್ನನ್ನು ಆಶೀರ್ವದಿಸುತ್ತಾ ತೋರುತ್ತಿರುವ ಪ್ರೀತಿಗೆ ನಾನು ಋಣಿ” ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಗಣೇಶ್.

“ವಿಭಿನ್ನ ಬಗೆಯ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರಾದ ನಿಮ್ಮನ್ನು ರಂಜಿಸಿ ಖುಷಿಪಡಿಸುವ ಕಾರ್ಯವನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಅವುಗಳಲ್ಲಿ ಅನೇಕ ಪಾತ್ರಗಳು ನಿಮಗೆ ಆಪ್ತವೆನಿಸಿದರೆ ಒಂದಷ್ಟು ನಿಮ್ಮನ್ನು ನಿರಾಸೆಗೊಳಿಸಿರಬಹುದು. ಹಾಗಾಗಿ ಸಿನಿಮಾ ಬಗ್ಗೆ ನೀವು ನೀಡಿರುವ ತೀರ್ಪುಗಳನ್ನು ಸಮಭಾವ, ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗದೆ, ಪ್ರತೀ ಚಿತ್ರದಲ್ಲೂ ನನ್ನಲ್ಲಿ ನಾನೇ ಒಬ್ಬ ಉತ್ತಮ ಕಲಾವಿದನಿಗಾಗಿ ಹುಡುಕಾಟ ನಡೆಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್.
“ನಿಮ್ಮ ನಂಬಿಕೆಯ ಗಣೇಶ ನಿಮ್ಮ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೆ ಹುಸಿ ಮಾಡದಂತೆ ಎಚ್ಚರ ವಹಿಸಿದ್ದೇನೆ. ಇದೆಲ್ಲವೂ ನೀವುಗಳು ನನ್ನ ಹಾಗೂ ನನ್ನ ಅಭಿನಯದ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ ಗೌರವ ಎಂಬುದಷ್ಟೆ ನನ್ನ ಭಾವನೆ” ಎಂದು ಬರೆದುಕೊಂಡಿದ್ದಾರೆ ಗಣೇಶ್.

ಪತ್ರದ ಕೊನೆಯಲ್ಲಿ “ಗಾಳಿಪಟ 2′ ಸಿನಿಮಾದ ಮೂಲಕ ಮನೆ-ಮನೆಗೆ ಖುಷಿಯನ್ನು ಹಂಚಿದ ನಿರ್ದೇಶಕರಾದ ನಲ್ಮೆಯ ಶ್ರೀ ಯೋಗರಾಜ್ ಭಟ್ ಅವರಿಗೆ, ಹೆಮ್ಮೆಯ ನಿರ್ಮಾಪಕರಾದ ರಮೇಶ್ ರೆಡ್ಡಿ ಅವರಿಗೆ, ವಿತರಿಸಿದ ಕೆವಿಎನ್ ಸಂಸ್ಥೆಗೆ ಹಾಗೂ ನಮ್ಮ ‘ಗಾಳಿಪಟ 2’ ಸಿನಿಮಾದ ಇಡೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಮನದಾಳದ ಧನ್ಯವಾದಗಳು ಹಾಗೂ ಹೃತ್ಪೂರ್ವಕ ಅಭಿನಂದನೆಗಳು. ಮನರಂಜಿಸುವ ಕಾಯಕ ನಿರಂತರವಾಗಿ ಸಾಗಲು ನಿಮ್ಮ ಪ್ರೀತಿ ಜೊತೆಗೆ ಅಕ್ಕರೆ ತುಂಬಿದ ಅಭಿಮಾನ ಸದಾ ಜೊತೆಗಿದ್ದರೆ ಸಾಕು” ಎಂದಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.
ಒಟ್ಟಿನಲ್ಲಿ ಬಹು ವರ್ಷಗಳ ನಂತರ ತಾವು ನಟಿಸಿದ ಸಿನಿಮಾ ಗೆದ್ದಿರುವುದಕ್ಕೆ ಗೋಲ್ಡನ್ ಸ್ಟಾರ್ ಖುಷಿ ಪಟ್ಟರೆ, ತಮ್ಮ ನೆಚ್ಚಿನ ನಟ ಸಿನಿಮಾ ಸದ್ದು ಮಾಡುತ್ತಿರುವುದು ವೀಕ್ಷಕರಿಗೆ ಸಂತಸ ನೀಡಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ