ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಧನುಷ್ ಗೌಡ. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಧನುಷ್ ಗೌಡ ಈಗ ಮನೆ ಮೆಚ್ಚಿದ ಅಳಿಯ ಹೌದು! ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ 2022 ಇತ್ತೀಚೆಗೆ ನಡೆದಿದ್ದು ಅದರಲ್ಲಿ ಮನೆ ಮೆಚ್ಚಿದ ಅಳಿಯ ಪ್ರಶಸ್ತಿ ಪಡೆದಿದ್ದಾರೆ ಧನುಷ್ ಗೌಡ.

ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಧನುಷ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ನಟನೆಯೇ ನನ್ನ ಉಸಿರು ಎಂದು ಹೇಳುವ ಧನುಷ್ ಗೌಡ ಇಂದು ವಿಜಯ್ ಆಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ ಎಂದರೆ ಅದಕ್ಕೆ ಅವರ ತಮ್ಮ ಮತ್ತು ಮಾವ ಕಾರಣ.

“ನೀನು ನೋಡುವುದಕ್ಕೆ ಚೆನ್ನಾಗಿದ್ದೀಯ. ನೀನು ಯಾಕೆ ಅಭಿನಯ ಕ್ಷೇತ್ರಕ್ಕೆ ಕಾಲಿಡಬಾರದು? ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬಾರದು” ಎಂದು ಕೇಳಿದರು. ಆ ಒಂದು ಮಾತೇ ಇಂದು ಧನುಷ್ ಅವರನ್ನು ವಿಜಯ್ ಆಗಿ ಬದಲಾಗುವಂತೆ ಮಾಡಿತು. ನಟನಾಗಬೇಕು ಎಂಬ ನಿರ್ಧಾರ ಮಾಡಿದ ಧನುಷ್ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸೇರಿ ನಟನೆಯ ರೀತಿ ನೀತಿ ತಿಳಿದರು.

ಗೀತಾ ಧಾರಾವಾಹಿಯ ವಿಜಯ್ ಆಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ಧನುಷ್ ಗೌಡ “ಮೊದಲ ಧಾರಾವಾಹಿಯಲ್ಲಿಯೇ ನಾನು ನಾಯಕನಾಗಿ ನಟಿಸುತ್ತೇನೆ ಎಂದು ಕನಸಿನಲ್ಲಿಯೂ ಎನಿಸಿರಲಿಲ್ಲ. ನಾನು ನಾಯಕನಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿದಾಗ ಸ್ವರ್ಗಕ್ಕೆ ಮೂರೇ ಗೇಣು” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಧನುಷ್ ಗೌಡ.
ಇದರ ಜೊತೆಗೆ ” ಒಂದೇ ಧಾರಾವಾಹಿಯಲ್ಲಿ ಬೇರೆ ಬೇರೆ ಪಾತ್ರದಲ್ಲಿ ನಟಿಸುವ ಅವಕಾಶ ಯಾರಿಗೂ ಸಿಗುವುದಿಲ್ಲ. ಆದರೆ ಅದು ನನಗೆ ಸಿಕ್ಕಿದೆ. ನಾನು ಈ ಧಾರಾವಾಹಿಯಲ್ಲಿ ನಾನು ಖಳನಾಯಕ ಮಾತ್ರವಲ್ಲದೇ ಪೂಜಾರಿ, ಹುಡುಗಿ ಹೀಗೆ ಬೇರೆ ಬೇರೆ ಪಾತ್ರಕ್ಕೆ ಜೀವ ತುಂಬಿದ್ದೇನೆ. ಖುಷಿಯಾಗುತ್ತಿದೆ” ಎಂದು ಹೇಳುತ್ತಾರೆ ಧನುಷ್ ಗೌಡ.

“ನನಗೆ ವಿಜಯ್ ಪಾತ್ರ ನೀಡಿ ಬೆಂಬಲ ನೀಡಿದ ಗೀತಾ ಧಾರಾವಾಹಿಯ ನಿರ್ದೇಶಕ, ನಿರ್ಮಾಪಕರಿಗೆ, ಕಲರ್ಸ್ ಕನ್ನಡ ವಾಹಿನಿಗೆ, ಕುಟುಂಬಸ್ಥರಿಗೆ ನನ್ನ ಕಡೆಯಿಂದ ಧನ್ಯವಾದಗಳು” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಧನುಷ್ ಗೌಡ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ