ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೈಮಾತಾ ಕಂಬೈನ್ಸ್ ನಡಿಯಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯು ಇದ್ದಕ್ಕಿದ್ದಂತೆ ಮುಕ್ತಾಯಗೊಂಡಿದೆ. ದೊರೆಸಾನಿಯಲ್ಲಿ ನಾಯಕ ಬ್ಯುಸಿನೆಸ್ ಮ್ಯಾನ್ ವಿಶ್ವನಾಥನ್ ಆನಂದ್ ಆಗಿ ಅಭಿನಯಿಸಿದ್ದ ಮೂಲಕ ಕಿರುತೆರೆಗೆ ಕಾಲಿಟ್ಟು, ಮನೋಜ್ಞ ನಟನೆಯ ಮೂಲಕ ಮನೆ ಮಾತಾಗಿರುವ ಹುಡುಗನ ಹೆಸರು ಪೃಥ್ವಿರಾಜ್.
ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡ ಪೃಥ್ವಿರಾಜ್ ಅವರು ಕೇವಲ ಕಡಿಮೆ ಅವಧಿಯಲ್ಲಿಯೇ ಕಿರುತೆರೆ ಎಂಬ ಪುಟ್ಟ ಪ್ರಪಂಚದಲ್ಲಿ ತಮ್ಮದೇ ಆದ ಹವಾವನ್ನು ಸೃಷ್ಟಿ ಮಾಡಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಪೃಥ್ವಿರಾಜ್ ಪದವಿಯ ಬಳಿಕ ಐಟಿ ಕಂಪೆನಿಯೊಂದರಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕೆಲಸವನ್ನು ಪಡೆದುಕೊಂಡರು.

ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಪೃಥ್ವಿರಾಜ್ ನಟನೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರು. ಅದೇ ಕಾರಣಕ್ಕಾಗಿ ಕೆಲಸಕ್ಕೆ ವಿದಾಯ ಹೇಳಿದ ಪೃಥ್ವಿರಾಜ್ ಆಡಿಶನ್ ಗಳತ್ತ ಚಿತ್ತ ಹರಿಸಿದರು. ಮರಳಿ ಮರಳಿ ಯತ್ನ ಮಾಡುತ್ತಿದ್ದ ಪೃಥ್ವಿರಾಜ್ ಅವರು ಆಡಿಶನ್ ಗಳಲ್ಲಿ ಆಯ್ಕೆಯಾದರೂ ಅದು ಕೊರೊನಾ ಸಮಯ ಆಗಿದ್ದುದ್ದರಿಂದ ಯಾವುದೇ ಪ್ರಾಜೆಕ್ಟ್ ಆರಂಭವಾಗಿರಲಿಲ್ಲ.
ಆದರೂ ಛಲ ಬಿಡದ ಪೃಥ್ವಿರಾಜ್ ಆಡಿಶನ್ ಗಳಲ್ಲಿ ಭಾಗವಹಿಸುವುದನ್ನು ತಪ್ಪಿಸುತ್ತಿರಲಿಲ್ಲ. ಇದ್ದ ಆಡಿಶನ್ ಗಳನ್ನು ತಪ್ಪದೇ ಭಾಗವಹಿಸುತ್ತಿದ್ದ ಪೃಥ್ವಿರಾಜ್ ಅವರನ್ನು ದೊರೆಸಾನಿ ಕೈ ಹಿಡಿಯಿತು. ದೊರೆಸಾನಿಯ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗಿರುವ ಪೃಥ್ವಿರಾಜ್ ಅವರು ಹಿರಿತೆರೆಯಲ್ಲಿಯೂ ಮೋಡಿ ಮಾಡಿದ್ದಾರೆ. ಓ ಮೈ ಲವ್ ಸಿನಿಮಾದಲ್ಲಿ ಇವರು ಬಣ್ಣ ಹಚ್ಚಿದ್ದು ಅದು ಈ ವರ್ಷ ಬಿಡುಗಡೆಯಾಗಲಿದೆ.

ದೊರೆಸಾನಿಯ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದ ಪೃಥ್ವಿರಾಜ್ ಬೇರೆ ಧಾರಾವಾಹಿಯಲ್ಲಿ ನಟಿಸುತ್ತಾರಾ, ಕಿರುತೆರೆಯಲ್ಲಿ ಮತ್ತೆ ನಟನಾ ಛಾಪನ್ನು ಮೂಡಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ