ಶಿವಾಜಿ ಸುರತ್ಕಲ್ 2 ಕೆಲಸದ ನಡುವೆಯೇ “ಶಿವಾಜಿ ಸುರತ್ಕಲ್ 3” ಬಗ್ಗೆ ಯೋಚಿಸುತ್ತಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. ಹೌದು! ಈಗಾಗಲೇ ಶಿವಾಜಿ ಸುರತ್ಕಲ್ ಬಿಡುಗಡೆಗೊಂಡು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಶಿವಾಜಿ ಸುರತ್ಕಲ್ 2 ಕೆಲಸದಲ್ಲಿ ಬಿಜಿಯಾಗಿರುವ ಚಿತ್ರ ತಂಡ ಸದ್ಯದಲ್ಲೇ ಚಿತ್ರದ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

“ರಮೇಶ್ ಅರವಿಂದ್ ಅವರು ಇತ್ತೀಚೆಗಷ್ಟೇ ತುಳುನಾಡು ಸಂಸ್ಕೃತಿಯಾದ ಯಕ್ಷಗಾನದ ವೇಷ ತೊಟ್ಟು ಕುಣಿದದ್ದು ಎಲ್ಲರ ಮನ ಗೆದ್ದಿದೆ. ಒಂದು ರೀತಿ ಇದೇ ನನಗೆ ಶಿವಾಜಿ ಸುರತ್ಕಲ್ 3 ಮಾಡಲು ಸ್ಪೂರ್ತಿ ಆಯ್ತು. ಶಿವಾಜಿ ಸುರತ್ಕಲ್ 2 ನಲ್ಲಿ ನಾವು ಸುರತ್ಕಲ್ ಹಾಗೂ ಮಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಿದ್ದೇವೆ” ಎಂದರು ಆಕಾಶ್ ಶ್ರೀವತ್ಸ.

“ಶಿವಾಜಿ ಸುರತ್ಕಲ್ 3ನಲ್ಲಿ ನಾವು ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಯೋಚನೆಯಲ್ಲಿದ್ದೇವೆ. ಇದು ನಾನು ಹಾಗೂ ರಮೇಶ ಅರವಿಂದ ಅವರು ಹಾಕಿಕೊಂಡಿರುವ ದೊಡ್ಡ ಯೋಜನೆ ಎಂದೇ ಹೇಳಬಹುದು” ಎಂದಿದ್ದಾರೆ.

ಕೊನೆಯದಾಗಿ “ಚಿತ್ರದ ಸ್ಕ್ರಿಪ್ಟ್ ಗೆ ನಾವು ಕರಾವಳಿಯ ಕಲೆಗಾರರು ಹಾಗೂ ಬರಹಗಾರರನ್ನು ಬಳಸಿಕೊಂಡು ಕರಾವಳಿಯ ಸೊಬಗನು ಗಟ್ಟಿಯಾಗಿ ಮೂಡಿಸುವ ಪ್ರಯತ್ನದಲ್ಲಿದ್ದೇವೆ. ಸದ್ಯದ ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ಶಿವಾಜಿ ಸುರತ್ಕಲ್ 3ರ ಕೆಲಸ ಶುರು ಮಾಡಲಿದ್ದೇವೆ” ಎಂದು ಶಿವಾಜಿ ಸುರತ್ಕಲ್ 3 ಬಗ್ಗೆ ಮಾತನಾಡಿದರು ಚಿತ್ರದ ನಿರ್ದೇಶಕ ಆಕಾಶ ಶ್ರೀವತ್ಸ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ