ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿರುವ ದಿಗಂತ್ ಮಂಚಾಲೆ ಹಾಗೂ ಅನಂತ್ ನಾಗ್ ಇದೀಗ ಮತ್ತೆ ಜೋಡಿಯಾಗಿ ಅಭಿನಯಿಸಲಿದ್ದಾರೆ. ಸಂಜಯ್ ಶರ್ಮಾ ಅವರ ನಿರ್ದೇಶನದ ಮೊದಲ ಸಿನಿಮಾ ತಿಮಯ್ಯ ಮತ್ತು ತಿಮ್ಮಯ್ಯ ದಲ್ಲಿ ಜೋಡಿಯಾಗಿ ನಟಿಸಲಿದ್ದಾರೆ ದಿಗಂತ್ ಮಂಚಾಲೆ ಮತ್ತು ಅನಂತ್ ನಾಗ್. ಆ ಮೂಲಕ ಬೆಳ್ಳಿ ಪರದೆಯ ಮೇಲೆ ಮತ್ತೊಮ್ಮೆ ಮ್ಯಾಜಿಕ್ ಸೃಷ್ಟಿ ಮಾಡಲು ಈ ಜೋಡಿ ಸಿದ್ಧರಾಗಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದಿಗಂತ್ ಮಂಚಾಲೆ “ಸಂಜಯ್ ಶರ್ಮಾ ಅವರ ಜಾಹೀರಾತುಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ ನಾನು ಕೆಲಸ ಮಾಡಿದ್ದು ನನಗೆ ತುಂಬಾ ಇಷ್ಟವಾಯಿತು. ಇನ್ನು ತಿಮ್ಮಯ್ಯ ಮತ್ತು ತಿಮ್ಮಯ್ಯ ಸಿನಿಮಾದಲ್ಲಿ ನಾನು ಅನಂತ್ ನಾಗ್ ಅವರ ಮೊಮ್ಮಗನಾಗಿ ನಟಿಸುತ್ತಿದ್ದೇನೆ. ಕೂರ್ಗ್‌ನಲ್ಲಿ ಮಕ್ಕಳಿಗೆ ಅಜ್ಜನ ಹೆಸರನ್ನು ಇಡುವುದು ಸಂಪ್ರದಾಯವಾಗಿರುವುದರಿಂದ ಚಿತ್ರದಲ್ಲಿ ನಾವಿಬ್ಬರೂ ಒಂದೇ ಹೆಸರನ್ನು ಹೊಂದಿದ್ದೇವೆ” ಎಂದು ಸಿನಿಮಾದ ಹಾಗೂ ಪಾತ್ರದ ಬಗ್ಗೆ ಹೇಳುತ್ತಾರೆ.

ಐದನೇ ಬಾರಿಗೆ ಅನಂತ್ ನಾಗ್ ಅವರೊಂದಿಗೆ ಕೆಲಸ ಮಾಡುತ್ತಿರುವ ದಿಗಂತ್ ಅವರು ಸಕತ್ ಖುಷಿಯಲ್ಲಿರುವುದಂತೂ ನಿಜ. ಈ ಕುರಿತು ಮನ ಬಿಚ್ಚಿ ಮಾತನಾಡಿರುವ ದಿಗಂತ್ “ಅನಂತ್ ನಾಗ್ ಅವರು ನಟನೆಯ ಶಕ್ತಿಯಾಗಿದ್ದಾರೆ. ಅವರು ಸೆಟ್‌ನಲ್ಲಿ ನಟಿಸುವುದನ್ನು ನೋಡಲು ಯಾವಾಗಲೂ ತುಂಬಾ ಸಂತೋಷವಾಗುತ್ತದೆ. ಚಿತ್ರೀಕರಣದ ಒಂದು ದಿನ ಮೊದಲು ಅವರು ನಮಗೆ ಬದಲಾವಣೆಗಳ ಬಗ್ಗೆ ಹೇಳಲು ಕರೆಯುತ್ತಿದ್ದರು. ಅವರು ತಮ್ಮ ಪಾತ್ರಕ್ಕೆ ಅತ್ಯುತ್ತಮವಾದದ್ದನ್ನು ನೀಡುವಂತೆ ಮಾಡಿದ್ದಾರೆ. ಈ ರೀತಿಯ ಸಮರ್ಪಣೆ ಮತ್ತು ತಯಾರಿ ನಿಜವಾಗಿಯೂ ಗಮನಾರ್ಹವಾಗಿದೆ” ಎನ್ನುತ್ತಾರೆ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ದಿಗಂತ್ ಬ್ಯಾಚುಲರ್ ಪಾರ್ಟಿಯ ಮೊದಲ ಶೆಡ್ಯೂಲ್ ಶೂಟ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಬ್ಯಾಚುಲರ್ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಅವರೊಂದಿಗೆ ನಟಿಸಲಿರುವ ಇವರು “ನಾನು ವಿವಾಹಿತ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರವನ್ನು ನಿರ್ವಹಿಸುತ್ತೇನೆ. ಮೊದಲ ಹಂತದ ಶೂಟಿಂಗ್ ಮುಗಿದಿದ್ದು ನಾವು ಥಾಯ್ಲೆಂಡ್‌ನಲ್ಲಿ ಮತ್ತೊಂದು ಶೆಡ್ಯೂಲ್ ಶೂಟಿಂಗ್‌ಗೆ ಸಜ್ಜಾಗುತ್ತಿದ್ದೇವೆ. ಅಲ್ಲಿ ಅಚ್ಯುತ್ ಮತ್ತು ರಿಷಬ್ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ