ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಆಗಸ್ಟ್ 5ರಂದು ಸಭೆ ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಹೇಳಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ನಾವು ಆಗಸ್ಟ್ 5 ರಂದು ಮತ್ತೊಮ್ಮೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಮಂಗಳವಾರ ಬೆಳಗ್ಗೆ ಸಂಸತ್ತಿನ ಗ್ರಂಥಾಲಯ ಭವನದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ಆರಂಭವಾಯಿತು. ಸಂಸತ್ ಲೈಬ್ರರಿ ಕಟ್ಟಡದಲ್ಲಿ ನಡೆದ ಸಭೆಗೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಶ್ವಿನಿ ವೈಷ್ಣವ್, ಎಸ್ ಜೈಶಂಕರ್, ಅನುರಾಗ್ ಠಾಕೂರ್ ಮತ್ತು ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ಆಗಮಿಸಿದ್ದರು. ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್ 10ಕ್ಕೆ ಕೊನೆಗೊಳ್ಳುವ ಕಾರಣ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಜಗದೀಪ್ ಧನಕರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದರೆ, ವಿರೋಧ ಪಕ್ಷಗಳು ಮಾರ್ಗರೇಟ್ ಆಳ್ವ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿವೆ.