ಕರ್ನಾಟಕದ ಮಾಸ್ ಲೀಡರ್ ಮತ್ತು ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಿದ್ದರಾಮೋತ್ಸವ (Siddaramotsava) ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಬಿಟ್ಟೂಬಿಡದಂತೆ ಸುರಿಯುತ್ತಿರುವ ಮಳೆಯು ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದೆ. ರಾಜ್ಯದ ವಿವಿಧೆಡೆಯಿಂದ ಬರುತ್ತಿರುವ ಅಭಿಮಾನಿಗಳು, ವಾಹನಗಳಿಂದ ಇಳಿದ ತಕ್ಷಣ ಅವರಿಗೆ ಮಳೆಯ ಸ್ವಾಗತ ಸಿಗುತ್ತಿದೆ. ಮಳೆಗೂ ಲೆಕ್ಕಿಸದೇ ಅಭಿಮಾನಿಗಳ ದೊಡ್ಡ ದಂಡು ದಾವಣಗೆರೆಗೆ ಬಂದಿದೆ.
ದಾವಣಗೆರೆಯಲ್ಲಿ ಜಿಟಿಜಿಟಿ ಮಳೆ ಶುರುವಾಗಿದ್ದು, ರಸ್ತೆಗಳಲ್ಲಿ ನಿಂತು ತಮ್ಮ ನೆಚ್ಚಿನ ನಾಯಕನ ಪರ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಭವಾಗಲಿ’ ಎಂದು ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಶ್ಯಾಮನೂರು ಪ್ಯಾಲೇಸ್ಗೆ ಬಸ್ಗೆ ಕಾಯುತ್ತಿದ್ದ ಅಭಿಮಾನಿಗಳು ಮಳೆ ಶುರುವಾಗುತ್ತಿದ್ದಂತೆ ರಕ್ಷಣೆಗಾಗಿ ರೈಲ್ವೆ ನಿಲ್ದಾಣಕ್ಕೆ ಓಡಿ ಬಂದರು. ಬೀದರ್, ಔರದ್, ಬಾಗಲಕೋಟೆ, ಗುಲ್ಬರ್ಗ, ಯಾದಗಿರಿ,ಚುಂಚನ ಸೂರು, ಗುರುಮಟ್ಕಲ್, ಸುರಪುರ, ಬಾದಾಮಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ.
ಸಿದ್ದರಾಮೋತ್ಸವಕ್ಕೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಿಂದ ರಾತ್ರಿ 12ರ ಸುಮಾರಿಗೆ ಸುಮಾರು 70 ಕೂಸರ್ ವಾಹನಗಳಲ್ಲಿ ಅಭಿಮಾನಿಗಳು ದಾವಣಗೆರೆಯತ್ತ ಹೊರಟರು. ಬಾಗಲಕೋಟೆ ಜಿಲ್ಲೆಯಿಂದ 132 ಸಾರಿಗೆ ನಿಗಮದ ಬಸ್ಗಳು, ಸಾವಿರಕ್ಕೂ ಅಧಿಕ ಕ್ರೂಸರ್ ಹಾಗೂ ವೈಯಕ್ತಿಕ ಕಾರುಗಳಲ್ಲಿ ಅಭಿಮಾನಿಗಳು ದಾವಣಗೆರೆ ಕಡೆಗೆ ಸಾಗುತ್ತಿದ್ದಾರೆ. ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಿಂದ ೫೦ ಬಸ್, ಟೆಂಪೊ, ಕ್ರೂಸರ್ ಸೇರಿದಂತೆ 600 ವಾಹನಗಳು ಹೊರಟಿವೆ. ಬಾಗಲಕೋಟೆಯಿಂದ ಸುಮಾರು 30 ಸಾವಿರ ಮಂದಿ, ಬಾದಾಮಿ ಕ್ಷೇತ್ರದಿಂದ ಸುಮಾರು 10 ಸಾವಿರ ಮಂದಿ ದಾವಣಗೆರೆಗೆ ತೆರಳಿದ್ದಾರೆ.
ಸಿದ್ದರಾಮೋತ್ಸವಕ್ಕೆ ಬರುವ ಕಾರ್ಯಕರ್ತರ ಊಟೋಪಚಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊಸರನ್ನ, ಪಲಾವ್, ಬಿಸಿಬೇಳೆಬಾತ್ಗೆ 80 ಟನ್ ಅಕ್ಕಿ, 15 ಟನ್ ಬೇಳೆ, 700 ಟಿನ್ ಎಣ್ಣೆ (1 ಟಿನ್ ಅಂದರೆ 10.5 ಕೆಜಿ), ಟೊಮೆಟೊ 8 ಟನ್, ಈರುಳ್ಳಿ 18 ಟನ್, 15,000 ನಿಂಬೆಹಣ್ಣು, 4 ಟನ್ ಬಿನ್ಸ್, 4 ಟನ್ ತುಪ್ಪ, 2 ಸಾವಿರ ಲೀಟರ್ ಮೊಸರು, 12 ಸಾವಿರ ಲೀ ಹಾಲು, 4 ಟನ್ ಕೋಸು, 2 ಕ್ವಿಂಟಲ್ ಶುಂಠಿ, 6 ಟನ್ ಹಸಿಮೆಣಸಿನಕಾಯಿ, 2 ಟನ್ ಒಣಕೊಬ್ಬರಿ ಸೇರಿ 25 ಟನ್ ತರಕಾರಿಗಳನ್ನು ಬಳಸಲಾಗುತ್ತಿದೆ. ಊಟ ಬಡಿಸಲು 6 ಲಕ್ಷ ಅಡಿಕೆತಟ್ಟೆ ಹೊಂದಿಸಿಕೊಂಡಿದ್ದು, 800 ಡಬ್ಬಿ ಉಪ್ಪಿನಕಾಯಿ ತರಿಸಲಾಗಿದೆ.
ಕಾರ್ಯಕರ್ತರಿಗೆ ಸಿಹಿ ವಿತರಿಸಲು 6 ಲಕ್ಷ ಮೈಸೂರುಪಾಕ್ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 5 ಟನ್ ತುಪ್ಪ, 2 ಟನ್ ಎಣ್ಣೆ, 18 ಟನ್ ಸಕ್ಕರೆ, 18 ಟನ್ ಕಡಲೆಹಿಟ್ಟು ಬಳಕೆಯಾಗಿದೆ. ರಾಹುಲ್ ಗಾಂಧಿ ಮತ್ತು 2 ಸಾವಿರ ವಿವಿಐಪಿಗಳಿಗಾಗಿ ಹೋಳಿಗೆ, ಪೂರಿ, ಚನ್ನಾ ಮಸಾಲ, ಪಲಾವ್, ಮೈಸೂರುಪಾಕ್ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.