ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿರುವ ಎಂ ಎಸ್ ಧೋನಿ ಅವರು ಭಾರತದೆಲ್ಲಡೆ ಚಿರಪರಿಚಿತ. ಭಾರತೀಯ ಕ್ರಿಕೆಟ್ ತಂಡಕ್ಕೆ ಅಪಾರ ಸೇವೆ ಸಲ್ಲಿಸಿರುವ ಇವರು, ಕ್ರಿಕೆಟ್ ಪ್ರೇಮಿಗಳೆಲ್ಲರ ಅಚ್ಚುಮೆಚ್ಚು. ಸದ್ಯ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಧೋನಿ, ಐಪಿಎಲ್ ನಲ್ಲಷ್ಟೇ ಸಕ್ರೀಯರಾಗಿದ್ದಾರೆ. ಈಗ ಮಹೇಂದ್ರ ಸಿಂಗ್ ಧೋನಿ ಅವರು ಸಿನಿಮಾರಂಗದತ್ತ ಆಸಕ್ತಿ ತೋರುತ್ತಿದ್ದಾರೆ. ಅದು ಕೂಡ ನಿರ್ಮಾಪಕರಾಗಿ.

ಹೌದು, ಕ್ರಿಕೆಟ್ ನಲ್ಲಿ ಬಹು ಪ್ರಖ್ಯಾತರಾಗಿರುವ ಧೋನಿ ಇದೀಗ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಲಿದ್ದಾರೆ. ಈ ಹೊಸ ಸಂಸ್ಥೆಗೆ ‘ಧೋನಿ ಎಂಟರ್ಟೈನ್ಮೆಂಟ್’ ಎಂದು ಹೆಸರಿಡಲಾಗಿದೆ. ಧೋನಿ ಚೆನ್ನೈ ಜನತೆಗೆ ಅತೀ ಆತ್ಮೀಯರು. ಐಪಿಎಲ್ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಆಟವಾಡುವ ಇವರು, ಚೆನೈ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅದೇ ಕಾರಣದಿಂದ ‘ಧೋನಿ ಎಂಟರ್ಟೈನ್ಮೆಂಟ್’ನ ಮೊದಲ ಆದ್ಯತೆ ತಮಿಳು ಚಿತ್ರಗಳಾಗಿರಲಿವೆ. ಜೊತೆಗೆ ದಕ್ಷಿಣ ಭಾರತೀಯ ಸಿನಿಮಾಗಳ ಅಭಿಮಾನಿಯಾಗಿರುವ ಧೋನಿ, ತಮಿಳಿನ ಜೊತೆಗೆ ಮಲಯಾಳಂ ಹಾಗು ತೆಲುಗು ಸಿನಿಮಾಗಳನ್ನು ನಿರ್ಮಿಸಲಿದ್ದಾರೆ ಎಂಬ ಸುದ್ದಿಯಿದೆ.

‘ಧೋನಿ ಎಂಟರ್ಟೈನ್ಮೆಂಟ್’ ಪ್ರೊಡಕ್ಷನ್ ಸಂಸ್ಥೆ ಸದ್ಯ ಧೋನಿ ಹಾಗು ಅವರ ಪತ್ನಿ ಸಾಕ್ಷಿ ಧೋನಿ ಅವರ ಮಾಲೀಕತ್ವದಲ್ಲಿದೆ. ಬೇರೆ ಬೇರೆ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ‘ರೋರ್ ಆಫ್ ದಿ ಲಯನ್’, ‘ಬ್ಲೇಜ್ ಟು ಗ್ಲೋರಿ’, ಹಾಗು ‘ದಿ ಹಿಡನ್ ಹಿಂದು’ ಸೇರಿದಂತೆ ಹಲವು ವೆಬ್ ಸೀರೀಸ್ ಗಳನ್ನೂ ನಿರ್ಮಾಣ ಮಾಡಿದ್ದು, ಇದೀಗ ಪೂರ್ಣಪ್ರಮಾಣದಲ್ಲಿ ದೊಡ್ಡಮಟ್ಟದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ