ಹಾಸ್ಯ ಕಲಾವಿದರರಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕರು ಇಂದು ನಾಯಕರಾಗಿ ಭಡ್ತಿ ಪಡೆದಿದ್ದಾರೆ. ಅಂದ ಹಾಗೇ ಇವರು ಕೂಡಾ ಅಷ್ಟೇ.. ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಜಗತ್ತಿಗೆ ಕಾಲಿಟ್ಟು, ಮುಂದೆ ಹಾಸ್ಯ ಕಲಾವಿದನಾಗಿ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದ ಅಪ್ಪಣ್ಣ ಈಗಾಗಲೇ ನಾಯಕನಾಗಿ ತೆರೆ ಮೇಲೆ ಮಿಂಚಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸ್ಪರ್ಧಿಯಾಗಿ ಕಿರುತೆರೆಗೆ ಕಾಲಿಟ್ಟ ಅಪ್ಪಣ್ಣ ಅವರು ತಮ್ಮ ನವಿರಾದ ಹಾಸ್ಯದ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ. ಪೋಷಕ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಿರುವ ಅಪ್ಪಣ್ಣ ಹದಿನೆಂಟು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ನಟಿಸಿದ್ದು ಶಿವು ಗಣೇಶ್ ನಿರ್ದೇಶನದ ಯಾರಿಗೂ ಹೇಳ್ಬೇಡಿ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದರು.

ಇದರ ಜೊತೆಗೆ ಪ್ರಿಯಾಂಕಾ ಉಪೇಂದ್ರ ಅಭಿನಯದ ಮಿಸ್ ನಂದಿನಿಯಲ್ಲಿಯೂ ಬಣ್ಣ ಹಚ್ಚಿರುವ ಅಪ್ಪಣ್ಣ ಅದರಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಆರ್ ಸಿ ಬಿ ಸಿನಿಮಾದಲ್ಲಿಯೂ ಇವರು ನಟಿಸಿದ್ದು ಇದೀಗ ಆ್ಯಪಲ್ ಕಟ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶವನ್ನು ಕೂಡಾ ಪಡೆದುಕೊಂಡಿದ್ದಾರೆ.

ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕ ರಾಜ ಕಿಶೋರ್ ಅವರ ಮಗಳು ಸಿಂಧೂ ಗೌಡ ನಿರ್ದೇಶನ ಮಾಡುತ್ತಿರುವ Apple Cut ಸಿನಿಮಾದಲ್ಲಿ ನಾಯಕನಾಗಿ ಅಪ್ಪಣ್ಣ ನಟಿಸಲಿದ್ದಾರೆ. ಮರ್ಡರ್ ಮಿಸ್ಟರಿ ಕಥಾನಕವನ್ನು ಹೊಂದಿರುವ ಈ ಸಿನಿಮಾದಲ್ಲಿ ಅಪ್ಪಣ್ಣ ಅವರು ಎರಡನೇ ನಾಯಕನಾಗಿ ತೆರೆ ಮೇಲೆ ಮಿಂಚಲಿದ್ದಾರೆ.

ಇನ್ನು ಅಪ್ಪಣ್ಣ ಅವರು ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡಾ ಮಾಡಿಕೊಂಡಿದ್ದಾರೆ. ಕಠಿಣ ಡಯೆಟ್ ಮಾಡಿರುವ ಅವರು ಬರೋಬ್ಬರಿ 20 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. “20ಕೆಜಿ ತೂಕ ಇಳಿಸಿಕೊಳ್ಳುವುದು ನಿಜವಾಗಿ ಕಷ್ಟವಲ್ಲ. ಮೊದಲಿಗೆ ಅದಕ್ಕೆ ಸಾಕಷ್ಟು ಶ್ರದ್ಧೆ ಮುಖ್ಯ. ನಾನು ಪ್ರತಿದಿನ ನಾಲ್ಕು ಗಂಟೆಗೆ ಎದ್ದು 10 ಕಿಲೋ ಮೀಟರ್ ನಷ್ಟು ಓಡ್ತಿದ್ದೆ. ಇದರ ಹೊರತಾಗಿ ವಾರದಲ್ಲಿ ಮೂರು ದಿನ ಸ್ವಿಮ್ಮಿಂಗ್ ಜೊತೆಗೆ ಜಿಮ್ ನಲ್ಲಿ ಎರಡು ತಾಸು ವರ್ಕೌಟ್ ಮಾಡುತ್ತಿದೆ. ಒಟ್ಟು ನಾಲ್ಕು ತಿಂಗಳಿನಲ್ಲಿ 20ಕೆಜಿ ಇಳಿಸಿದೆ” ಎನ್ನುತ್ತಾರೆ ಅಪ್ಪಣ್ಣ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ