ವಿಭಿನ್ನ ರೀತಿಯ ಧಾರಾವಾಹಿಗಳ ಜೊತೆಗೆ ವಿನೂತನ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯೂ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಸಾಲಿಗೆ ಸೇರ್ಪಡೆಗೊಂಡಿರುವ ಕನ್ನಡತಿಯಲ್ಲಿ ನಾಯಕ ಹರ್ಷನ ಅಮ್ಮ ರತ್ನಮಾಲಾ ಆಲಿಯಾಸ್ ಅಮ್ಮಮ್ಮನಾಗಿ ನಟಿಸುತ್ತಿರುವ ಚಿತ್ಕಲಾ ಬಿರಾದಾರ್ ಕೇವಲ ನಾಯಕ ಹರ್ಷನ ಅಮ್ಮ ಮಾತ್ರವಲ್ಲ, ಮನೆ ಮೆಚ್ಚಿದ ಅಮ್ಮ ಕೂಡಾ ಹೌದು.

ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ 2022 ಇತ್ತೀಚೆಗಷ್ಟೇ ನಡೆದಿದ್ದು ಮನೆ ಮೆಚ್ಚಿದ ಅಮ್ಮ ಪ್ರಶಸ್ತಿ ರತ್ನಮಾಲಾ ಆಲಿಯಾಸ್ ಅಮ್ಮಮ್ಮ ಮುಡಿಗೇರಿದೆ. ಮನೋಜ್ಞ ನಟನೆಯ ಮೂಲಕ ಕಿರುತೆರೆ ಎನ್ನುವ ಪುಟ್ಟ ಜಗತ್ತಿನಲ್ಲಿ ಜನಪ್ರಿಯತೆ ಗಳಿಸಿರುವ ಚಿತ್ಕಲಾ ಬಿರಾದಾರ್ ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಎನ್ನುವ ವಿಚಾರ ಹಲವರಿಗೆ ತಿಳಿದಿಲ್ಲ.

ಸ್ನಾತಕೋತ್ತರ ಪದವಿಯ ಬಳಿಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಚಿತ್ಕಲಾ ಬಿರಾದಾರ್ ಅಚಾನಕ್ ಆಗಿ ಅಭಿನಯರಂಗಕ್ಕೆ ಕಾಲಿಟ್ಟವರು. ಯಾವಾಗ ನಟಿಸುವ ಅವಕಾಶ ದೊರಕಿತೋ ಆಗ ಕೆಲಸಕ್ಕೆ ವಿದಾಯ ಹೇಳಿದ ಚಿತ್ಕಲಾ ನಟನೆಗೆ ಪಾದಾರ್ಪಣೆ ಮಾಡಿದರು. ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ಸಣ್ಣ ಪರದೆಗೆ ಕಾಲಿಟ್ಟ ಚಿತ್ಕಲಾ ಬಿರಾದಾರ್ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ.

ಮುಂದೆ ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ನೂರೆಂಟು ಸುಳ್ಳು, ಬಾ ನನ್ನ ಸಂಗೀತ, ಮಾನಸ ಸರೋವರ ಹೀಗೆ ಮೂವತ್ತೈದು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ವೀಕ್ಷಕರ ಮನ ಸೆಳೆದಿರುವ ಅಮ್ಮಮ್ಮರನ್ನು ಜನ ಗುರುತಿಸಿದ್ದು ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಾಯಕಿಯ ಅಮ್ಮ ಪುಷ್ಪವಲ್ಲಿಯ ಪಾತ್ರದಿಂದ. ಅವನು ಮತ್ತು ಶ್ರಾವಣಿಯಲ್ಲಿ
ಚಿತ್ಕಲಾ ಬಿರಾದಾರ್ ಅವರು ಅಯ್ಯಂಗಾರ್ ಮಹಿಳೆ ಪುಷ್ಪವಲ್ಲಿಯಾಗಿ ಕಾಣಿಸಿಕೊಂಡಿದ್ದು ಆ ಪಾತ್ರದಿಂದ ಅವರು ಕಿರುತೆರೆಯಲ್ಲಿ ಫೇಮಸ್ಸು ಆದರು.

ಇದೀಗ ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಆಲಿಯಾಸ್ ರತ್ನಮಾಲಾ ಆಗಿ ನಟಿಸಿ ಮನೆ ಮೆಚ್ಚಿದ ಅಮ್ಮ ಆಗಿ ಮಿಂಚಿರುವ ಚಿತ್ಕಲಾ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡ ಪ್ರತಿಭೆ. ಮದುವೆ ಮನೆ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಆಕೆ ಸಂತು ಸ್ಟ್ರೇಟ್ ಫಾರ್ವರ್ಡ್, ಬಜಾರ್, ನರಗುಂದ ಬಂಡಾಯ, ಹಗಲುಕನಸು, ಮಾಯಾ ಬಜಾರ್, ಏನೆಂದು ಹೆಸರಿಡಲಿ, ವಿಕ್ರಾಂತ್ ರೋಣ, ಯುವರತ್ನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ತ್ರಿಬ್ಬಲ್ ರೈಡಿಂಗ್, ಕಾಲಚಕ್ರ, ರಾಗಭೈರವಿ, ಸ್ಟೀಲ್ ಪಾತ್ರೆ ಸಾಮಾನು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅದೆಲ್ಲಾ ಇನ್ನು ತೆರೆ ಕಾಣಬೇಕಿದೆ.

“ಕಿರುತೆರೆ ಜಗತ್ತಿನಲ್ಲಿ ನಾನು ಅಮ್ಮನಾಗಿ ನಟಿಸಿದ್ದೇ ಹೆಚ್ಚು. ಈ ಮೊದಲು ನನಗೆ ಜನಪ್ರಿಯತೆ ನೀಡಿದ್ದ ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ ಧಾರಾವಾಹಿಯ ಅಮ್ಮನ ಪಾತ್ರಕ್ಕೂ, ಕನ್ನಡತಿಯ ರತ್ನಮಾಲಾ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಅಮ್ಮಮ್ಮನಂತಹ ಅದ್ಭುತ ಪಾತ್ರ ನನ್ನ ಪಾಲಾಗಿರುವುದು ಸಂತಸವೇ ಸರಿ. ನಾನಿಂದು ಎತ್ತ ಹೋದರೂ ಜನ ನನ್ನನ್ನು ಅಮ್ಮಮ್ಮ ಎಂದೋ, ರತ್ನಮಾಲಾ ಎಂದೋ ಗುರುತಿಸುವಾಗ ಸಂತಸವಾಗುತ್ತದೆ. ಕಲಾವಿದೆಗೆ ಇದಕ್ಕಿಂತ ದೊಡ್ಡ ಸನ್ಮಾನ ಬೇರೇನೂ ಬೇಕಿದೆ” ಎನ್ನುತ್ತಾರೆ ಚಿತ್ಕಲಾ ಬಿರಾದಾರ್.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ