ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರುವಾಸಿಯಾಗಿರುವ ಚಂದು ಗೌಡ ಅವರು ಮತ್ತೊಂದು ಸಿನಿಮಾದೊಂದಿಗೆ ಮರಳುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿನ ಚಂದು ಆಗಿ ಕರುನಾಡಿನಾದ್ಯಂತ ಮನೆ ಮಾತಾಗಿರುವ ಚಂದು ಗೌಡ ಈಗ ಹಿರಿತೆರೆಯಲ್ಲಿಯೂ ಬ್ಯುಸಿಯಾಗಿದ್ದಾರೆ.

ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಚಂದು ಗೌಡ ಅವರು ಹೊಸ ಚಿತ್ರವೊಂದಕ್ಕೆ ನಾಯಕನಾಗಿ ಅಭಿನಯಿಸುವುದು ಬಹುತೇಕ ಖಚಿತವಾಗಿದೆ. ಒಂದು ಚಿಕ್ಕ ಪಟ್ಟಣದ ಹುಡುಗನೊಬ್ಬ ರೌಡಿಸಂಗೆ ಒಳಗಾಗುವ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ‘ಬರ್ಬರಿಕಾ’ ಎಂಬ ಶೀರ್ಷಿಕೆಯ ಈ ಚಿತ್ರವನ್ನು ಈ ಹಿಂದೆ ನಿರ್ದೇಶಕ ಕೆವಿ ರಾಜು ಅವರಿಗೆ ಸಹಾಯಕರಾಗಿದ್ದ ಶಾಂಡಿಲ್ಯ ನಿರ್ದೇಶಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚಂದು “ಚಿತ್ರವು ಹೆಚ್ಚಿನ ಗಾಂಭೀರ್ಯವನ್ನು ಹೊಂದಿದ್ದು, ಅಲ್ಲದೆ ದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ” ಎಂದಿದ್ದಾರೆ.

ಇದರ ಜೊತೆಗೆ “ನಾನು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ತೆಲುಗು ಧಾರಾವಾಹಿ ತ್ರಿನಯನಿ ಜನಪ್ರಿಯವಾಗಿರುವುದರಿಂದ, ಈ ಚಿತ್ರವನ್ನು ತೆಲುಗು ಭಾಷೆಯಲ್ಲೂ ಮಾಡುವುದು ಅರ್ಥಪೂರ್ಣವೆಂದು ಚಿತ್ರತಂಡದ ಅನಿಸಿಕೆ” ಎಂದರು.

”ಚಲನಚಿತ್ರವು ಪೂರ್ಣ ಪ್ರಮಾಣದ ಸಾಹಸ ದೃಶ್ಯಗಳನ್ನು ಪ್ರದರ್ಶಿಸಲಿದೆ. ಇದು ಡಾನ್ ಒಬ್ಬನ ಹೆಂಚ್‌ಮ್ಯಾನ್ ಆಗಿರುವ ಸಣ್ಣ ಪಟ್ಟಣವೊಂದರ ಹುಡುಗನ ಜೀವನ ಕಥೆಯನ್ನು ಹೇಳಲಿದೆ” ಎಂದು ಹಂಚಿಕೊಂಡರು.

ಅಲ್ಲದೆ ಕಥೆಯ ಕಾನ್ಸೆಪ್ಟ್ ಹೊಸದೇನಲ್ಲ ಎನ್ನುತ್ತಾರೆ ಚಂದು. ”ಇತಿಹಾಸಕ್ಕೆ ಸೇರಿರುವ ಕಥೆಗಳ ಅಂಶಗಳನ್ನು ಬಳಸಿಕೊಂಡಿದ್ದೇವೆ. ವಿಶಿಷ್ಟ ಚಿತ್ರಕಥೆಯೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆದ ಅನೇಕ ಚಲನಚಿತ್ರಗಳು ನಮ್ಮಲ್ಲಿವೆ. ನಾವು ಬರ್ಬರಿಕಾ ಚಿತ್ರವನ್ನು ಕೂಡ ಹಾಗೆಯೇ ಮಾಡಲು ಇಷ್ಟಪಡುತ್ತೇವೆ” ಎಂದು ಹೇಳಿದ್ದಾರೆ.

“ಬರ್ಬರಿಕಾ ಎಂಬ ಶೀರ್ಷಿಕೆಯು ಮಹಾಭಾರತದಲ್ಲಿದ್ದ ಉಲ್ಲೇಖವಾಗಿದೆ. ಮಹಾಭಾರತ ಕಥೆಯಲ್ಲಿ ಬರ್ಬರಿಕಾ ಎಂಬುದು ಘಟೋತ್ಕಚನ ಮಗನ ಹೆಸರು. ಸಿನೆಮಾ ನೋಡಿದಾಗ ಈ ಹೆಸರನ್ನು ಯಾಕೆ ಬಳಸಿಕೊಂಡಿದ್ದೇವೆ ಎಂಬುದು ನಿಮಗೆಲ್ಲಾ ಗೊತ್ತಾಗುತ್ತದೆ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ