ಕನ್ನಡ ಚಿತ್ರರಂಗದಲ್ಲಿ ‘ಮಚ್ಚು’ ಎಂಬ ಪದ ಕೇಳಿದರೆ ಮೊದಲು ನೆನಪಾಗುವ ಹೆಸರೇ ಶಿವಣ್ಣ. ‘ಹ್ಯಾಟ್ರಿಕ್ ಹೀರೋ’ ಎನಿಸಿಕೊಂಡಿರುವ ಶಿವಣ್ಣ ಮಚ್ಚು ಹಿಡಿದು ಬಂದರೆ ಅದರ ಗತ್ತೇ ಬೇರೆ. ‘ಓಂ’ ಸಿನಿಮಾದಿಂದ ಆರಂಭಿಸಿ ಅಲ್ಲಿಂದ ಇಲ್ಲಿಯವರೆಗೂ ಹಲವು ಸಿನಿಮಾಗಳಲ್ಲಿ ಮಚ್ಚು ಹಿಡಿದು ಡಾನ್ ಆಗಿ ತೆರೆಮೇಲೆ ಕಂಡರೂ ಸಹ, ಅದೇ ಹಳೆ ಎನರ್ಜಿಯನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಇವರಂತೆಯೇ ಹಲವು ನಟರು ರಗಡ್ ಆಗಿ ಕಾಣಿಸಿಕೊಳ್ಳಲು ಪ್ರಯತ್ನಪಟ್ಟರು ಸಹ, ಇವರ ಛಾಪು ಇನ್ನೆಲ್ಲೂ ಕಾಣಲೇ ಇಲ್ಲ. ಸದ್ಯ ಶಿವಣ್ಣ ತಮ್ಮ 125ನೇ ಸಿನಿಮಾದಲ್ಲಿ ಮರಳಿ ಮಚ್ಚು ಹಿಡಿದು ಬರಲು ಸಜ್ಜಾಗಿದ್ದಾರೆ.

‘ಕರುನಾಡ ಚಕ್ರವರ್ತಿ’ಯ ಮುಂದಿನ ಬಹುನಿರೀಕ್ಷಿತ ಸಿನಿಮಾವೆಂದರೆ ಅದು ‘ವೇದ. ‘ಭಜರಂಗಿ’,’ವಜ್ರಕಾಯ’ ಮುಂತಾದ ಹಿಟ್ ಸಿನಿಮಾಗಳನ್ನ ಶಿವಣ್ಣ ಜೊತೆಗೆ ನೀಡಿರುವ ಎ. ಹರ್ಷ ಅವರು ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ವಿಶೇಷವಾಗಿ ‘ವೇಪನ್ಸ್ ಆಫ್ ವೇದ’ ಎಂಬ ಟೀಸರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

‘ವೇದ’ ಒಂದು ಕ್ರಾಂತಿಕಾರಿ ಚಳುವಳಿಯ ಕಥೆ ಹೊಂದಿದೆ ಎನ್ನಲಾಗುತ್ತಿದೆ. ಅದರಲ್ಲೂ ಇದು 1960ರ ಕಾಲಘಟ್ಟದ ಚಿತ್ರ. ಹಾಗಾಗಿ ಆ ಸಂದರ್ಭದ ಸಮಾಜ-ಸಂಗ್ರಾಮವನ್ನ ಸಿನಿಮಾದಲ್ಲಿ ತೋರಿಸಿರುವ ಸಾಧ್ಯತೆಯಿದೆ. ಅದಕ್ಕೇ ಸಂಭಂಧಿಸಿದಂತೆ, ಅಂದಿನ ಹೋರಾಟಗಳಲ್ಲಿ ಜನರು ಬಳಸುತ್ತಿದ್ದ ಆಯುಧಗಳ ಒಂದು ಮುನ್ನೋಟವನ್ನ ಈ ‘ವೇಪನ್ಸ್ ಆಫ್ ವೇದ’ ಟೀಸರ್ ನಲ್ಲಿ ತೋರಿಸಲಾಗಿದೆ. ಈಗಾಗಲೇ ಹಿಂದಿನ ಪೋಸ್ಟರ್ ಗಳಲ್ಲಿ ಕಾಣಿಸಿಕೊಂಡಂತೆ, ಶಿವಣ್ಣ ಮಚ್ಚು ಹಿಡಿದು ನಿಂತಿದ್ದಾರೆ.

ವಿಶೇಷವೆಂದರೆ ಟೀಸರ್ ನಲ್ಲಿ ಮಹಿಳೆಯರೇ ಹೆಚ್ಚಾಗಿ ಕಾಣುತ್ತಿದ್ದಾರೆ. ಹಾಗಾಗಿಯೇ ಇದೊಂದು ಮಹಿಳಾ ಚಳುವಳಿಯ ಹಿನ್ನೆಲೆ ಕಥೆಯಾಗಿರಬಹುದು ಎಂಬ ಸುದ್ದಿಯೂ ಕೇಳಿಬರುತ್ತಿದೆ. ಈ ಎಲ್ಲ ಕುತೂಹಲಗಳನ್ನ ನಿವಾರಿಸಿಕೊಳ್ಳಲು ಇದೇ ಡಿಸೆಂಬರ್ 23ರ ವರೆಗೂ ಕಾಯಲೇಬೇಕಾಗುತ್ತದೆ. ಶಿವರಾಜ್ ಕುಮಾರ್ ಅವರ 125ನೇ ಚಿತ್ರವಾಗಿರುವ ‘ವೇದ’ ಡಿಸೆಂಬರ್ 23ರಂದು ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಇರಲಿದ್ದು, ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಶಿವಣ್ಣನೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದರ ಮೂಲಕ ಗೀತಾ ಶಿವರಾಜಕುಮಾರ್ ಅವರು ನಿರ್ಮಾಪಕರಾಗಿದ್ದಾರೆ. ಜೊತೆಗೆ ‘ಜೀ ಸ್ಟುಡಿಯೋಸ್’ ಕೂಡ ಸಿನಿಮಾದ ನಿರ್ಮಾಣದಲ್ಲಿ ಕೈಜೋಡಿಸಿದೆ. ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ತುಂಬಾ ನಿರೀಕ್ಷೆಯ ಮಾತುಗಳು ಕೇಳಿಬರುತ್ತಿದ್ದೂ, ಚಂದನವನದಿಂದ ಬರುತ್ತಿರುವ ಮುಂದಿನ ದೊಡ್ಡ ಸಿನಿಮಾ ಇದಾಗಿ, ಡಿಸೆಂಬರ್ 23ಕ್ಕೆ ತೆರೆಕಾಣಲಿದೆ. ಶಿವಣ್ಣ ಮಚ್ಚು ಹಿಡಿದರೆ ಚಿತ್ರಕ್ಕೆ ಯಶಸ್ಸು ಖಂಡಿತ ಎಂಬ ಮಾತು ಮತ್ತೊಮ್ಮೆ ನಿಜವಾಗುವ ಎಲ್ಲ ಸಾಧ್ಯತೆಗಳೂ ಇವೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ