ಮಳೆಯಿಂದ (Rain) ಹಾನಿಗೊಳಗಾದ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಭೆ ನಡೆಸಿ ಮನೆ ಹಾನಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆರೆಕಟ್ಟೆಗಳು ಒಡೆಯದಂತೆ ನಿಗಾ ವಹಿಸಿಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು
1. ಸತತ ಮಳೆಯಿಂದ ಎಲ್ಲಾ ಕೆರೆಗಳು ತುಂಬಿವೆ. ಕೆರೆಗಳ ಕಟ್ಟೆಗಳು ಮತ್ತು ಕೋಡಿಗಳು ದುರ್ಬಲಗೊಂಡಿರುತ್ತವೆ. ಸಂಗ್ರಹ ಸಾಮರ್ಥ್ಯ ಹೆಚ್ಚಿರುವ ಕೆರೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆರೆಗಳು ವಡ್ಡು ಬಿರುಕು ಬಿಡದಂತೆ ಎಚ್ಚರ ವಹಿಸಬೇಕು. ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ಈ ಬಗ್ಗೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
2. ರಕ್ಷಣೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚನೆ
3. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಿದುಹೋದ ರಸ್ತೆ ಸಂಪರ್ಕವನ್ನು ಪುನ:ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಿ
4. ಬಿದ್ದುಹೋದ ಮನೆಗಳ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ಕೈಗೊಳ್ಳುವುದು. ಭೂ ಕುಸಿತ ಸಂಭವಿಸುವ ಸಾಧ್ಯತೆ ಇರುವ ಕಡೆಗಳಲ್ಲಿ ಜನರನ್ನು ಮುಂಚಿತವಾಗಿಯೇ ಸ್ಥಳಾಂತರ ಮಾಡುವುದು.
5. ಭಟ್ಕಳದಲ್ಲಿ ಹಾಗೂ ಸುಳ್ಯದ ಸೇರಿದಂತೆ ಇತರ ಕಡೆಗಳ ವಾಣಿಜ್ಯ ಸಂಕೀರ್ಣಗಳಲ್ಲಿ ನೀರು ನುಗ್ಗಿ ಹಾಳಾಗಿರುವ ಬಗ್ಗೆ ವರದಿ ಸಲ್ಲಿಸಬೇಕು.
6. ರೆಡ್ ಅಲರ್ಟ್ ಇರುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು.
7. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತವಾಗುವ ಬಗ್ಗೆ ಎಚ್ಚರ ವಹಿಸಬೇಕು.
8. ಪ್ರವಾಹದಂಥ ತುರ್ತು ಸಂದರ್ಭದಲ್ಲಿ ತಕ್ಷಣ ಪರಿಹಾರ ಕ್ರಮಕೈಗೊಂಡು, ಆ ಮೂಲಕ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂಬ ಸಂದೇಶ ರವಾನೆ ಮಾಡಬೇಕಿದೆ.
9. ಜಿಲ್ಲಾಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಪರಿಹಾರ ವಿತರಣೆಗೆ ವಿಳಂಬ ಧೋರಣೆ ಅನುಸರಿಸದೆ, ಕೂಡಲೇ ಪರಿಹಾರ ವಿತರಿಸಲು ಸೂಚಿಸಲಾಗಿದೆ.
10. ಹಾನಿಯಾಗಿರುವ ಮನೆಗಳ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ತಾಲೂಕು ಪಂಚಾಯತಿ ಇಒಗಳಿಂದ ಪಡೆಯುವುದು.
11. ಕಾಳಜಿ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ತಹಶೀಲ್ದಾರ್ಗಳು ಖಾತರಿ ಪಡಿಸಿಕೊಂಡು ಅದನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು.
12. ಮೈಸೂರು, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು
13. ಹಾನಿಗೊಳಗಾಗಿರುವ ಮೀನುಗಾರರ ದೋಣಿಗಳ ದುರಸ್ತಿಗೆ ತಗಲುವ ವೆಚ್ಚವನ್ನು ಅಂದಾಜು ಮಾಡಲು ಸೂಚನೆ
14. ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ರಕ್ಷಣೆ, ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು.
ಸಿಎಂ ಬೊಮ್ಮಾಯಿ ಮಳೆಯಿಂದ ಹಾನಿಯಾದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
1. ಬೆಳೆ ಹಾನಿ ಒಟ್ಟು 3499 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದ್ದು, 2057 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ
2. ಮನೆ ಹಾನಿ 2430 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. 4378 ಮನೆಗಳು ಭಾಗಶಃ ಹಾನಿಯಾಗಿವೆ
3. ಜೀವ ಹಾನಿ ಜೀವ ಹಾನಿ -39 99 ಪ್ರಾಣಿ ಹಾನಿ
4. ರಸ್ತೆ 1730 ಕಿ.ಮೀ ರಸ್ತೆ ಹಾನಿ, 5419 ಕಿ.ಮಿ ಗ್ರಾಮೀಣ ರಸ್ತೆ ಹಾನಿಯಾಗಿವೆ
629 ಸೇತುವೆಗಳು ಹಾನಿಯಾಗಿವೆ. 3264 ಶಾಲಾ ಕಟ್ಟಡಗಳು ಹಾನಿಯಾಗಿದ್ದು, 29 ಪ್ರಾಥಮಿಕ ಆರೋಗ್ಯ ಕಟ್ಟಡಗಳ ಹಾನಿಯಾಗಿವೆ.
5. ವಿದ್ಯುತ್ ಕಂಬ 11796 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಹಾಗೂ 759 ಟ್ರಾನ್ಸ್ ಫಾರ್ಮರ್ಗಳು ಹಾನಿಗೊಳಪಟ್ಟಿವೆ.
ಮಳೆಯಿಂದ ಹಿಂದಿನ ವರ್ಷಗಳಲ್ಲಿ ಮನೆ ಹಾನಿ ಪರಿಹಾರ ಪಡೆದಿರುವ ಸಂತ್ರಸ್ತರು ಪುನಃ ಮನೆ ಹಾನಿ ಪರಿಗಣಿಸುವ ಕುರಿತು ಕಂದಾಯ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಿದೆ. ವಾಸದ ಮನೆ ಅಧಿಕೃತ ಮನೆಯಾದಲ್ಲಿ ನಿಯಮಾನುಸಾರ ಪರಿಹಾರ ವಿತರಿಸಬೇಕು.
ಜಮೀನಿನಲ್ಲಿ ಕಟ್ಟಿರುವ ಮನೆಗಳು, ಸರ್ಕಾರಿ ಜಮೀನು ಹಾಗೂ ಗೋಮಾಳಗಳಲ್ಲಿ ಜನ ವಾಸವಾಗಿರುವ ಮನೆಗಳು ಅನಧಿಕೃತವಾದಲ್ಲಿ ನಿಯಮಾನುಸಾರ ಅಫಿಡವಿಟ್ ಪಡೆದು 1 ಲಕ್ಷ ರೂ. ಪರಿಹಾರ ನೀಡಬೇಕು. ವಿವಿಧ ಸರ್ಕಾರಿ ವಸತಿ ಯೋಜನೆಯಡಿ ಮನೆ ಪೂರ್ಣಗೊಂಡು ಜನ ವಾಸವಿದ್ದು ಹಾನಿಯಾದಲ್ಲಿ ಎ, ಬಿ, ಸಿ ಕೆಟಗರಿಯಲ್ಲಿ ಪರಿಹಾರ ನೀಡಬೇಕು.
2019, 2020, 2021ನೇ ಸಾಲಿನಲ್ಲಿ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿದ್ದ ಮನೆಗಳು ಪುನಃ ಹಾನಿಯಾದರೆ ಪರಿಹಾರ ಇರುವುದಿಲ್ಲ. 2019, 2020ನೇ ಸಾಲಿನಲ್ಲಿ ಸಿ ಕೆಟಗರಿಯಲ್ಲಿ 50 ಸಾವಿರ ಪಡೆದು, 2022ರಲ್ಲೂ ಹಾನಿಯಾದಲ್ಲಿ ಎ, ಬಿ, ಸಿ ಕೆಟಗರಿಯಲ್ಲಿ ಪರಿಹಾರ ನೀಡಬೇಕು ಎಂದು ತಿಳಿಸಿದೆ.