ಕಿರುತೆರೆ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಅನೇಕ ನಟ – ನಟಿಯರು ಇಂದು ಹಿರಿತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ರಾಧಿಕಾ ಪಂಡಿತ್, ಶ್ವೇತಾ ಶ್ರೀವಾತ್ಸವ್, ರಚಿತಾ ರಾಮ್, ಅದಿತಿ ಪ್ರಭುದೇವ, ಮಯೂರಿ ಕ್ಯಾತರಿ ಹೀಗೆ ಕಿರುತೆರೆಯ ಸಾಕಷ್ಟು ನಟಿಯರು ಇಂದು ಬೆಳ್ಳಿತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಗೀತಾ ಭಾರತಿ ಭಟ್.

ಹೌದು, ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ಗೀತಾ ಆಲಿಯಾಸ್ ಗುಂಡಮ್ನ ಆಗಿ ಅಭಿನಯಿಸಿದ್ದ ಗೀತಾ ಭಾರತಿ ಭಟ್ ಇದೀಗ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಗಿಟ್ಟಿಸಿಕೊಂಡಿದ್ದಾರೆ. ಸಂತೋಷ್ ಕೊಡಂಕೇರಿ ನಿರ್ದೇಶನದ ಇನ್ನು ಹೆಸರಿಡಬೇಕಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ಮೋಡಿ ಮಾಡಲಿದ್ದಾರೆ ಗೀತಾ ಭಾರತಿ ಭಟ್. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ನಡೆದಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಗೀತಾಭಾರತಿ ಭಟ್ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆ. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಗೀತಾ ಆಲಿಯಾಸ್ ಗುಂಡಮ್ಮ ಆಗಿ ವೀಕ್ಷಕರನ್ನು ರಂಜಿಸಿದ್ದ ಗೀತಾ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಮನೆ ಮೆಚ್ಚಿದ ಸೊಸೆ ಪ್ರಶಸ್ತಿ ಪಡೆದರು. ಆ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಭಾರತಿ ಭಟ್ ಮುಂದೆ ಕಾಣಿಸಿಕೊಂಡಿದ್ದು ರಿಯಾಲಿಟಿ ಶೋ ವಿನಲ್ಲಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಹೋಗಿದ್ದ ಗೀತಾಭಾರತಿ ಭಟ್ ತಮ್ಮ ಮಾತು, ನಡವಳಿಕೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಬ್ರಹ್ಮಗಂಟು ಧಾರಾವಾಹಿಯ ನಂತರ ನಟನೆಯಿಂದ ದೂರವಿದ್ದ ಗೀತಾಭಾರತಿ ಭಟ್ ಕೊಂಚ ಗ್ಯಾಪ್ ನ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ಆದರೆ ಕಿರುತೆರೆಯ ಬದಲು ಹಿರಿತೆರೆಯ ಮೂಲಕ ಆಕೆ ಬಣ್ಣದ ಜಗತ್ತಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಗೀತಾ ಭಾರತಿ ಭಟ್ ಅವರಿಗೆ ಹಿರಿತೆರೆ ಹೊಸದೇನಲ್ಲ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಈಕೆ ಮುಂದೆ ಲವ್ ಮಾಕ್ಟೈಲ್ ಸಿನಿಮಾದಲ್ಲಿ ನಾಯಕ ಆದಿಯ ಗೆಳತಿ ರೀಮಾ ಆಗಿ ನಟಿಸಿದ್ದರು. ಇನ್ನು ಲವ್ ಮಾಕ್ಟೈಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗಿದ್ದು, ಅಲ್ಲಿಯೂ ರೀಮಾ ಪಾತ್ರಕ್ಕೆ ಗೀತಾಭಾರತಿ ಭಟ್ ಜೀವ ತುಂಬುವ ಮೂಲಕ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಿದರು. ಜೊತೆಗೆ ಮಂಕು ಬಾಯ್ ಫ್ಯಾಕ್ಸಿ ರಾಣಿ ಸಿನಿಮಾದಲ್ಲಿಯೂ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿರುವ ಗೀತಾ ಭಾರತಿ ಭಟ್ ಗಾಯಕಿಯೂ ಹೌದು ಎನ್ನುವ ವಿಚಾರ ಹಲವರಿಗೆ ತಿಳಿದಿಲ್ಲ.

ಹೌದು, ಶಾಸ್ತ್ರಬದ್ಧವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೊತೆಗೆ ಹಿಂದೂಸ್ಥಾನಿ ಸಂಗೀತವನ್ನು ಕಲಿತಿರುವ ಇವರು ಈಗಾಗಲೇ ಒಂದಷ್ಟು ಸಿನಿಮಾಗಳಿಗೆ ರೀ ರೆಕಾರ್ಡಿಂಗ್, ಟ್ರ್ಯಾಕ್, ಹಿನ್ನಲೆ ಗೀತೆಗಳನ್ನು ಹಾಡಿದ್ದಾರೆ. ಆದಿತ್ಯ ವಿನೋದ್ ನಿರ್ದೇಶನದ ಸ್ವೀಟೂ ಎನ್ನುವ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ